Select Your Language

Notifications

webdunia
webdunia
webdunia
webdunia

ಅತ್ಯಾಚಾರ ಭೀತಿ: ಚಲಿಸುತ್ತಿರುವ ರೈಲಿನಿಂದ ಹಾರಿದ ದಂಪತಿ

ದಂಪತಿಗಳು
ಕೆಲ ಕುಡುಕರ ಗುಂಪೊಂದು ರಾತ್ರಿ ಸಮಯದಲ್ಲಿ 25 ವರ್ಷದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ ಆಕೆಯ ಮೇಲೆ ಅತ್ಯಾಚಾರವೆಸಗುವುದಾಗಿ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ, ಮಹಿಳೆ ತನ್ನ ಪತಿ ಹಾಗೂ 10 ತಿಂಗಳ ಮಗುವಿನೊಂದಿಗೆ ಚಲಿಸುತ್ತಿರುವ ರೈಲಿನಿಂದ ಹೊರಗೆ ಹಾರಿದ ಭೀಕರ ಘಟನೆ ವರದಿಯಾಗಿದೆ.
 
ಹಿರಿಯ ರೈಲ್ವೆ ಪೊಲೀಸ್ ಅಧಿಕಾರಿಗಳ ಪ್ರಕಾರ, 32 ವರ್ಷ ವಯಸ್ಸಿನ ಅಶಾಬಲ್ ತಮ್ಮ ಪತ್ನಿ ಮತ್ತು 10 ತಿಂಗಳ ಮಗುವಿನೊಂದಿಗೆ ನವದೆಹಲಿಯ ಗಾಜಿಯಾಬಾದ್‌ನಿಂದ ಪಶ್ಚಿಮ ಬಂಗಾಳದ ಅಲಿಪುರ್ದುವರ್‌ಗೆ ತೆರಳಲು ಮಹಾನಂದಾ ಎಕ್ಸ್‌ಪ್ರೆಸ್ ರೈಲನ್ನು ಹತ್ತಿದ್ದಾರೆ. 
 
ರೈಲು ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯ ದಿನ್‌ಹಟಾ ರೈಲು ನಿಲ್ದಾಣ ತಲುಪುತ್ತಿದ್ದಂತೆ 10 ಜನ ಕುಡುಕರ ಗುಂಪು ರೈಲಿನಲ್ಲಿಯೇ ಮಹಿಳೆಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ನಂತರ ರೈಲು ಸಿಲಿಗಿರಿಗೆ ತಲುಪಿದ ನಂತರ ರೈಲಿನಲ್ಲಿದ್ದ ಬಹುತೇಕ ಪ್ಯಾಸೆಂಜರ್‌ಗಳು ಇಳಿದಿದ್ದರಿಂದ ಕುಡುಕರ ಗುಂಪಿಗೆ ವರದಾನವಾಗಿದೆ. 
 
ಆಶಾಬಲ್‌ನನ್ನು ಕಟ್ಟಿಹಾಕಿ ಮಹಿಳೆಯ ಮೇಲೆ ಅತ್ಯಾಚಾರವೆಸಗುವುದಾಗಿ ಕಿಡಿಗೇಡಿಗಳ ಗುಂಪು ಬೆದರಿಕೆಯೊಡ್ಡಿದೆ ಎನ್ನಲಾಗಿದೆ.
 
ನ್ಯೂ ಹಾಸಿಮರಾ ರೈಲ್ವೆ ನಿಲ್ದಾಣದಲ್ಲಿ ಗಾರ್ಡ್‌ಗೆ ಕುಡುಕರ ವರ್ತನೆಯ ಬಗ್ಗೆ ಮಾಹಿತಿ ನೀಡಿದ್ದೇನೆ. ಆದರೆ, ಮುಂದಿನ ರೈಲು ನಿಲ್ದಾಣದ್ಲಲಿ ದೂರು ದಾಖಲಿಸುವಂತೆ ಸಲಹೆ ನೀಡಿದ್ದಾನೆ ಎಂದು ಆಶಾಬಲ್ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
 
ಆರೋಪಿಗಳು ನನ್ನ ಮೇಲೆ ಅತ್ಯಾಚಾರವೆಸಗಬಹುದು ಎನ್ನುವ ಆತಂಕದಿಂದ ಚಲಿಸುತ್ತಿರುವ ರೈಲಿನಿಂದ ಹಾರಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. 
 
ಚಲಿಸುತ್ತಿರುವ ರೈಲಿನಿಂದ ಹಾರಿದ ದಂಪತಿಗಳನ್ನು ನೋಡಿದ ಅರಣ್ಯ ಸಿಬ್ಬಂದಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡ ದಂಪತಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಂಪತಿಗಳು ಚೇತರಿಕೆ ಕಂಡ ನಂತರ ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 

Share this Story:

Follow Webdunia kannada