ಲಕ್ನೋ : ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾಗಲು ನಿರಾಕರಿಸಿ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದು, ಆರೋಪಿಯನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಶಾರುಖ್ (24) ಎಂದು ಗುರುತಿಸಲಾಗಿದೆ. ಆರೋಪಿ ಆತ್ಮಹತ್ಯೆಗೆ ಶರಣಾದ ಯುವತಿಯೊಂದಿಗೆ ಸಂಬಂಧ ಹೊಂದಿದ್ದು, ಸಾಮಾಜಿಕ ಅವಮಾನದಿಂದ ತಪ್ಪಿಸಿಕೊಳ್ಳಲು ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪೀಡಿಸುತ್ತಿದ್ದ.
ಅಷ್ಟೇ ಅಲ್ಲದೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳದೇ ಹೋದರೆ ಸಾಯಬೇಕು ಎಂದು ಷರತ್ತನ್ನೂ ವಿಧಿಸಿದ್ದ. ಇದರಿಂದ ಬೇಸತ್ತ ಯುವತಿ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪ ಬಂದಿದೆ.
24 ವರ್ಷದ ಮೃತ ಯುವತಿ ಕೆಲವು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಆರೋಪಿಯ ಸಂಪರ್ಕಕ್ಕೆ ಬಂದಿದ್ದು, ಆರೋಪಿ ತನ್ನನ್ನು ಸೌರಭ್ ಎಂದು ಗುರುತಿಸಿಕೊಂಡಿದ್ದ. ಈ ಆರೋಪದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮೃತ ಯುವತಿಯ ತಂದೆ ತನ್ನ ಮಗಳಿಗೆ ಆರೋಪಿ ಕಿರುಕುಳ ನೀಡುತ್ತಿದ್ದ ಮತ್ತು ಇಸ್ಲಾಮಿಕ್ ಸಂಪ್ರದಾಯದಂತೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಎಂದು ಶುಕ್ರವಾರ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. ಅಲ್ಲದೇ ಆರೋಪಿ ತನ್ನ ಮಗಳ ಖಾಸಗಿ ಫೋಟೋಗಳು ಮತ್ತು ವೀಡಿಯೋಗಳನ್ನು ಸಹ ಹೊಂದಿದ್ದು, ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಮದುವೆಯಾಗುವಂತೆ ಬೆದರಿಕೆ ಹಾಕಿದ್ದಾನೆ ಎಂದು ಎಸಿಪಿ ಬಳಿ ಹೇಳಿಕೊಂಡಿದ್ದಾರೆ.