Publish Date: Sat, 13 Feb 2016 (14:39 IST)
Updated Date: Sat, 13 Feb 2016 (14:40 IST)
ಕಾಂಗ್ರೆಸ್ ಪಕ್ಷ ಯಾವತ್ತೂ ಭ್ರಷ್ಟಾಚಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.ಎಂ.ಶ್ರೀಧರನ್ ನೇತೃತ್ವದಲ್ಲಿ ಒಂದು ತಿಂಗಳಿನಿಂದ ನಡೆಯುತ್ತಿರುವ ಜನಪಕ್ಷ ಯಾತ್ರೆ ಜಾಥಾದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ರಾಹುಲ್, ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ವಿರೋಧಿಯಾಗಿದೆ. ಪಕ್ಷದ ಮುಖಂಡರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಸಾಬೀತಾದಲ್ಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸೋಲಾರ್ ಹಗರಣದಲ್ಲಿ ಮುಖ್ಯಮಂತ್ರಿ ಓಮನ್ ಚಾಂಡಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹಗರಣದಲ್ಲಿ ಭಾಗಿಯಾಗಿರುವುದು ಸಾಬೀತಾದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಕಾಂಗ್ರೆಸ್ ಮುಖಂಡರು ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವ ಬಗ್ಗೆ ಸಣ್ಣ ಸುಳಿವು ದೊರೆತರೂ ಕೂಡಾ ಕಾಂಗ್ರೆಸ್ ಪಕ್ಷ ಅಂತಹ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದರು.
ಸೋಲಾರ್ ಹಗರಣದ ಪ್ರಮುಖ ಆರೋಪಿಗಳಾದ ಎಸ್.ಸರಿತಾ ನಾಯರ್ ಮತ್ತು ರಾಧಾಕೃಷ್ಣನ್, ಸೋಲಾರ್ ಪವರ್ ಪ್ಯಾನಲ್ಸ್‌ಗಳನ್ನು ಅಳವಡಿಸುವುದಾಗಿ ಸಾವಿರಾರು ಜನರಿಗೆ ಭರವಸೆ ನೀಡಿ ವಂಚಿಸಿರುವ ಆರೋಪ ಎದುರಿಸುತ್ತಿದ್ದಾರೆ.