ನೋಟು ನಿಷೇಧದ ನಿರ್ಧಾರಕ್ಕೆ ಟೀಕೆಗಿಳಿದಿರುವ ಕಾಂಗ್ರೆಸ್ ಮೇಲಿ ಹರಿಹಾಯ್ದಿರುವ ನರೇಂದ್ರ ಮೋದಿ, ಇಂದಿರಾ ಗಾಂಧಿ ಗಾದಿ ಉಳಿಸಿಕೊಳ್ಳಲು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ 19 ತಿಂಗಳು ಸಂಪೂರ್ಣ ದೇಶವನ್ನು ಜೈಲಾಗಿ ಪರಿವರ್ತಿಸಿತ್ತು ಯಾರೊಬ್ಬರಲ್ಲಿಯೂ ಅಭಿಪ್ರಾಯ ಕೇಳದೆ ಕಾಂಗ್ರೆಸ್ 25 ಪೈಸೆಯನ್ನು ರದ್ದು ಮಾಡಿತು. ಅವರ ಘನತೆಗೆ ತಕ್ಕಂತೆ ಅವರು ಮಾಡಿದ್ದರು ಎಂದು ಪ್ರಧಾನಿ ವ್ಯಂಗ್ಯವಾಡಿದ್ದಾರೆ.
ಪ್ರಾಮಾಣಿಕತೆ ಹೆಸರಲ್ಲಿ ದೇಶವನ್ನು ತಪ್ಪು ದಾರಿಗೆ ಎಳೆಯುತ್ತಿರುವ ನಾಯಕರಲ್ಲಿ ಭ್ರಷ್ಟಾಚಾರ ಮತ್ತು ಅಪ್ರಾಮಾಣಿಕತೆ ಮುಂದುವರೆಯಬೇಕು ಎಂದು ಹೇಳುವ ಧೈರ್ಯ ನಿಮಗಿದೆಯೇ ಎಂದು ನಾನು ಕೇಳ ಬಯಸುತ್ತೇನೆ. ವಿಶೇಷವಾಗಿ, ನೋಟು ರದ್ದುಗೊಳಿಸಿರುವುದಕ್ಕೆ ಎದುರಾಗಿರುವ ಸಮಸ್ಯೆಗಳಿಗಾಗಿ ನನ್ನ ವಿರುದ್ಧ ಆರೋಪ, ಟೀಕೆಗಳಿಗಿಳಿದಿರುವ ಕಾಂಗ್ರೆಸ್ ನಾಯಕರು ಕೇವಲ ಹೇಳಿಕೆಗಳನ್ನು ನೀಡುತ್ತಾರೆ. ಆದರೆ ನಾನು ಜನರ ಸಮಸ್ಯೆಗಳನ್ನು ತಾದಾತ್ಮ್ಯತೆಯಿಂದ ನೋಡುತ್ತಿದ್ದೇನೆ ಎಂದಿದ್ದಾರೆ ಮೋದಿ .
ಉತ್ತರ ಪ್ರದೇಶದ ಘಾಜಿಪುರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿತ್ತು. ಆದರೆ ಅದನ್ನು ಹೇಗೆ ಕಿತ್ತೊಗೆಯಬೇಕು ಎಂದು ಈವರೆಗೆ ಆಡಳಿತ ನಡೆಸಿದ್ದ ಕೇಂದ್ರ ಸರಕಾರಕ್ಕೆ ತಿಳಿದಿರಲಿಲ್ಲ. ಆದರೆ ಈಗಿನ ಕೇಂದ್ರ ಸರಕಾರ ಸಾಕಷ್ಟು ಸಮಸ್ಯೆಯನ್ನು ಮೈಮೇಲೆ ಹೊತ್ತುಕೊಂಡು ಅದನ್ನು ಕಿತ್ತೊಗೆಯಲು ಪ್ರಯತ್ನಿಸುತ್ತಿದೆ ಎಂದರು.
ಇಂದು ಮಾಜಿ ಪ್ರಧಾನಿ ನೆಹರು ಅವರ ಜನ್ಮದಿನ. ಪ್ರಧಾನಿ ಕುಟುಂಬದವರು ಈವರೆಗೆ ಮಾಡದ ಕಾರ್ಯವನ್ನು ನಾನು ಮಾಡುತ್ತಿದ್ದೇನೆ. ಆ ಮೂಲಕ ಅವರ ಆತ್ಮಕ್ಕೆ ಗೌರವ ಸಲ್ಲಿಸಲು ಬಯಸುತ್ತೇನೆ ಎಂದ ಮೋದಿ, ನೋಟು ಬದಲಾವಣೆ ಮಾಡಿದ ಕಾರಣ ಕೆಲವು ಪಕ್ಷಗಳು ಚಿಂತಾಕ್ರಾಂತವಾಗಿವೆ. ಮುಂದೇನು ಮಾಡುವುದು ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಈ ನಡುವೆ ಸಾಮಾನ್ಯ ಜನರು ಎದುರಿಸುತ್ತಿರುವ ಅನಾನುಕೂಲತೆಗಳಿಗಾಗಿ ವಿಷಾದಿಸುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.