Publish Date: Thu, 19 Jan 2017 (11:56 IST)
Updated Date: Thu, 19 Jan 2017 (12:12 IST)
ಬಾಲಿವುಡ್ ಬ್ಲಾಕ್ ಬಸ್ಟರ್ ಸಿನಿಮಾ 'ಚೆನ್ನೈ ಎಕ್ಸಪ್ರೆಸ್' ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ದೆಹಲಿ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ.
ಮದುವೆಯಾಗುವುದಾಗಿ ನಂಬಿಸಿ 25 ವರ್ಷದ ಯುವತಿಯನ್ನು ನಿರ್ಮಾಪಕ ದೈಹಿಕವಾಗಿ ಬಳಸಿಕೊಂಡಿದ್ದಾನೆ. ಅನೇಕ ಬಾರಿ ಆಕೆಯ ಮೇಲೆ ಅತ್ಯಾಚಾರವಾಗಿದೆ ಎಂದು ದೂರು ದಾಖಲಾಗಿರುವುದಾಗಿ ಪೊಲೀಸರು ಮಾಹಿತಿ ನಡೆದಿದ್ದಾರೆ.
ಕರೀಂ ಮೊರಾನಿಯವರ ವಿರುದ್ದ ಐಪಿಸಿ ವಿಭಾಗ 417 (ಮೋಸ), 376 (ಅತ್ಯಾಚಾರ), 342 (ಅಕ್ರಮ ಬಂಧನ), 506 (ಬೆದರಿಕೆ), 493 ( ಮದುವೆಯಾಗುವುದಾಗಿ ನಂಬಿಸಿ ಮೋಸ) ಮತ್ತು ಇನ್ನಿತರ ವಿಭಾಗಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಬೇಕೆಂಬ ಮಹಾದಾಸೆ ಹೊಂದಿದ್ದ ಯುವತಿ 2015ರಲ್ಲಿ ಮೊರಾನಿ ಅವರನ್ನು ಭೇಟಿಯಾಗಿದ್ದರು. ಬಳಿಕ ಅವರಿಬ್ಬರು ಹತ್ತಿರವಾಗಿದ್ದರು. ಆಕೆಯ ಮೇಲೆ ಅತ್ಯಾಚಾರ ಎಸಗಿದ ಬಳಿಕ ಮೊರಾನಿ ಇದನ್ನು ಯಾರ ಬಳಿಯಾದರೂ ಹೇಳಿದರೆ ಗಂಭೀರ ಪರಿಣಾಮಗಳನ್ನೆದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗುತ್ತಿದೆ.
ತಮ್ಮ ಮೇಲಿನ ಆರೋಪವನ್ನು ಕರೀಂ ಅಲ್ಲಗಳೆದಿದ್ದು ಇದು ಸುಳ್ಳು ಮತ್ತು ಆಧಾರ ರಹಿತ ಆರೋಪ ಎಂದು ಹೇಳಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು ಇಲ್ಲಿಯವರೆಗೂ ನಿರ್ಮಾಪಕನನ್ನು ಬಂಧಿಸಲಾಗಿಲ್ಲ.
'ಚೆನ್ನೈ ಎಕ್ಸ್‌ಪ್ರೆಸ್' ಅಷ್ಟೇ ಅಲ್ಲದೇ 'ಹ್ಯಾಪಿ ನ್ಯೂ ಇಯರ್', 'ರಾ ಒನ್' ನಂತಹ ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಕರೀಂ ಹಣ ಹಾಕಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ