Select Your Language

Notifications

webdunia
webdunia
webdunia
webdunia

ಹಣವಿಲ್ಲವೆಂದು ಪತಿ ಶವವನ್ನು ರೈಲಿನಲ್ಲಿ ಬಿಟ್ಟು ಹೋದಳು

ಹಣವಿಲ್ಲವೆಂದು ಪತಿ ಶವವನ್ನು ರೈಲಿನಲ್ಲಿ ಬಿಟ್ಟು ಹೋದಳು
ನುವಾಪಾಡಾ , ಬುಧವಾರ, 21 ಡಿಸೆಂಬರ್ 2016 (12:13 IST)
ಶವ ಕೊಂಡೊಯ್ಯಲು ಹಣವಿಲ್ಲದೆ ಮಹಿಳೆಯೋರ್ವಳು ಪತಿಯ ಶವವನ್ನು ರೈಲಿನಲ್ಲಿಯೇ ಬಿಟ್ಟು ಹೋದ ಮನ ಕಲಕುವ ಘಟನೆ ನುವಾಪಾಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. 

 
ಅಲೆಮಾರಿ ಕೂಲಿ ಕಾರ್ಮಿಕಳಾದ ಸರೋಜಿನಿ ನಾಗ್ (25) ಕೊಮ್ನಾ ಬ್ಲಾಕ್‌ನ ಗೊಂದಾಮರ್ ಗ್ರಾಮ್ ಪಂಚಾಯತ್ ಅಡಿಯಲ್ಲಿ ಬರುವ ಧನುಝೋಸಾ ಗ್ರಾಮದ ನಿವಾಸಿಯಾಗಿದ್ದಾಳೆ. ತನ್ನ ಪತಿ ಜುಗಲ್ ನಾಗ್ (29) ಶವವನ್ನು ಹಳ್ಳಿಗೆ ತಂದು ಶವಸಂಸ್ಕಾರ ಮಾಡಲು ಹಣವಿಲ್ಲದೆ ಅದನ್ನಾಕೆ ನಾಗ್ಪುರದ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲೊಂದರಲ್ಲಿ ಬಿಟ್ಟು ಬಂದಿದ್ದಾಳೆ. 
 
ಜುಗಲ್ ಮತ್ತು ಸರೋಜಿನಿ ತಮ್ಮ ಮೂವರು ಮಕ್ಕಳೊಂದಿಗೆ (ಇಬ್ಬರು ಪುತ್ರಿಯರು ಮತ್ತು 18 ತಿಂಗಳ ಗಂಡು ಮಗು) ಕೂಲಿ ಕೆಲಸಕ್ಕಾಗಿ ಕಳೆದ ವರ್ಷ ಆಂಧ್ರ ಪ್ರದೇಶಕ್ಕೆ ವಲಸೆ ಹೋಗಿದ್ದರು.
 
ಗೌರಪೇಟೆ ಬಳಿಯ ಪೈದಾಪುಲಿ ಬಳಿ ಇಟ್ಟಿಗೆ ನಿರ್ಮಾಣ ಕೆಲಸ ಮಾಡುತ್ತಿದ್ದ ಅವರು ಮುಂಗಡವಾಗಿ 40,000ರೂಪಾಯಿಯನ್ನು ಪಡೆದಿದ್ದರು.  ಕಳೆದ ಕೆಲ ದಿನಗಳ ಹಿಂದೆ ಜುಗಲ್‌ಗೆ ಜ್ವರ ಕಾಣಿಸಿಕೊಂಡಿದ್ದು, ಸೂಕ್ತ ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರ ಸಿಗದೆ ಅವನ ಆರೋಗ್ಯ ಮತ್ತಷ್ಟು ಬಿಗಡಾಯಿಸಿದೆ. ಹೀಗಾಗಿ ತಾನು ಮುಂಗಡವಾಗಿ ಕೊಟ್ಟಿದ್ದ ಹಣದಲ್ಲಿ  30,000 ರೂಪಾಯಿಗಳನ್ನು ಹಿಂಪಡೆದ ಮಾಲೀಕ ಮರಳಿ ಹಳ್ಳಿಗೆ ಹಿಂತಿರುಗಲು ಹಣ ಕೊಟ್ಟು ಕಳುಹಿಸಿದ್ದಾನೆ.
 
ಜುಗಲ್ ಕುಟುಂಬ ರೈಲು ಹತ್ತಿ ಮರಳಿ ಊರಿಗೆ ಹೊರಟು ಡಿಸೆಂಬರ್ 11 ರಂದು ನಾಗ್ಪುರಕ್ಕೆ ತಲುಪಿತ್ತು. ಆ ಸಮಯದಲ್ಲಿ ತೀವ್ರ ಬಳಲಿದ್ದ ಜುಗಲ್ ಅಲ್ಲಿಯೇ ಸಾವನ್ನಪ್ಪಿದ್ದಾನೆ.
 
ಅಲ್ಲಿಂದ ಕುಟುಂಬ ಇನ್ನೊಂದು ರೈಲನ್ನೇರಿ ಒಡಿಶಾಕ್ಕೆ ತೆರಳಬೇಕಿತ್ತು. ಆದರೆ ಅವರ ಬಳಿ ಹಣವಿರಲಿಲ್ಲ. ಯಾರು ಕೂಡ ಹಣದ ಸಹಾಯ ಮಾಡಲು ಮನಸ್ಸು ಮಾಡಲಿಲ್ಲ. ಹೀಗಾಗಿ ಜುಗಲ್ ಪತ್ನಿ ಶವವನ್ನು ರೈಲಿನಲ್ಲಿಯೇ ಬಿಟ್ಟು ಮಕ್ಕಳೊಂದಿಗೆ ಮನೆಗೆ ಮರಳಿದ್ದಾಳೆ. 
 
ಇನ್ನು ಕೂಡ ಪತಿಯ ಸಾವಿನ ಆಘಾತದಿಂದ ಹೊರಬರದ ಸರೋಜಿನಿಯಿಂದ ಹೆಚ್ಚಿನ ವಿವರಗಳನ್ನು ಪಡೆಯಲು ಪೊಲೀಸರು ಸಹ ವಿಫಲರಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಯವರ ಮಲತಾಯಿ ಧೋರಣೆ ಸರಿಯಲ್ಲ: ಉಮಾಶ್ರೀ