Publish Date: Sat, 12 Sep 2026 (19:12 IST)
Updated Date: Sat, 12 Sep 2026 (19:16 IST)
ಅಂತರರಾಷ್ಟ್ರೀಯ ರಾಜತಾಂತ್ರಿಕ ವೇದಿಕೆಗಳಲ್ಲಿ ಅನೇಕ ಅಪರೂಪದ ಕ್ಷಣಗಳು ಎದುರಾಗುತ್ತವೆ, ಆದರೆ ಇತ್ತೀಚಿನ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ನಡೆದ ಒಂದು ಕ್ಷಣ ಇಡೀ ವಿಶ್ವದ ಗಮನ ಸೆಳೆದಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ನಡುವೆ ನಡೆದ ಕಣ್ಣೋಟ ಹಾಗೂ ಕೈಬೀಸಿದ ಕ್ಷಣವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಕರಚಾಲನೆ ಮಾಡಿದರು. ಪ್ರಧಾನಿ ಮೋದಿಯವರನ್ನು ಆತ್ಮೀಯವಾಗಿ ಅಭಿನಂದಿಸಿದ ತಕ್ಷಣವೇ, ಪುಟಿನ್ ಅವರ ಕಣ್ಣುಗಳು ಮೋದಿ ಅವರ ಹಿಂದೆ ನಿಂತಿದ್ದ ಅಜಿತ್ ದೋವಲ್ ಅವರ ಮೇಲೆ ಬಿದ್ದವು. ದೋವಲ್ ಅವರನ್ನು ನೋಡಿದ ತಕ್ಷಣ ಪುಟಿನ್ ಅವರ ಮುಖದಲ್ಲಿ ಒಂದು ವಿಶೇಷವಾದ ಕಿರುನಗೆ ಮೂಡಿತು ಮತ್ತು ಅವರು ಪ್ರತ್ಯೇಕವಾಗಿ ದೋವಲ್ ಅವರಿಗೆ ಕೈಬೀಸಿ ಗೌರವ ಸೂಚಿಸಿದರು. ದೋವಲ್ ಕೂಡ ಮುಗುಳುನಗುತ್ತಾ ಅವರಿಗೆ ಪ್ರತಿನಮಸ್ಕಾರ ತಿಳಿಸಿದರು.
ಈ ಸಣ್ಣ ಸನ್ನೆ ರಾಜತಾಂತ್ರಿಕ ವಲಯದಲ್ಲಿ ಇಷ್ಟೊಂದು ಚರ್ಚೆಗೆ ಕಾರಣವಾಗಲು ಪ್ರಮುಖ ಕಾರಣ ಇಬ್ಬರ ಭೂತಕಾಲ! ರಷ್ಯಾದ ಅಧ್ಯಕ್ಷರಾಗುವ ಮೊದಲು, ಪುಟಿನ್ ಅವರು ಸೋವಿಯತ್ ಒಕ್ಕೂಟದ ಪ್ರಸಿದ್ಧ ಗೂಢಚಾರಿ ಸಂಸ್ಥೆ KGB (ಕೆಜಿಬಿ) ಯಲ್ಲಿ ಸುದೀರ್ಘ ಕಾಲ ವಿದೇಶಿ ಗೂಢಚಾರಿಯಾಗಿ ಸೇವೆ ಸಲ್ಲಿಸಿದವರು. ಭಾರತದ "ಜೇಮ್ಸ್ ಬಾಂಡ್" ಎಂದೇ ಕರೆಯಲ್ಪಡುವ ದೋವಲ್ ಅವರು, ಭಾರತದ ಗುಪ್ತಚರ ಸಂಸ್ಥೆ IB (ಇಂಟೆಲಿಜೆನ್ಸ್ ಬ್ಯೂರೋ) ನಲ್ಲಿ ದಶಕಗಳ ಕಾಲ ರಹಸ್ಯ ಕಾರ್ಯಾಚರಣೆಗಳನ್ನು ನಡೆಸಿದವರು. ಪಾಕಿಸ್ತಾನದಲ್ಲಿ ವರ್ಷಗಳ ಕಾಲ ಅಂಡರ್‌ಕವರ್ ಏಜೆಂಟ್ ಆಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರದ್ದು.
ಇಬ್ಬರೂ ತಮ್ಮ ತಮ್ಮ ದೇಶಗಳ ಅತ್ಯುನ್ನತ ಭದ್ರತಾ ಸಂಸ್ಥೆಗಳಲ್ಲಿ ಗೂಢಚಾರರಾಗಿ ಸೇವೆ ಸಲ್ಲಿಸಿ, ಇಂದು ಜಾಗತಿಕ ರಾಜಕೀಯದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಾನದಲ್ಲಿದ್ದಾರೆ. ಹೀಗಾಗಿ, ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು "ಒಬ್ಬ ಲೆಜೆಂಡರಿ ಸ್ಪೈ ಇನ್ನೊಬ್ಬ ಲೆಜೆಂಡರಿ ಸ್ಪೈಗೆ ನೀಡಿದ ಗೌರವ ಇದಾಗಿದೆ" ಎಂದು ಕೊಂಡಾಡುತ್ತಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ