Publish Date: Thu, 24 Sep 2015 (16:39 IST)
Updated Date: Thu, 24 Sep 2015 (16:42 IST)
ಬಿಹಾರ್ ವಿಧಾನಸಭೆ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎನ್ನುವ ಆತಂಕದಿಂದಾಗಿ ಜಾತಿ ಆಧಾರಿತ ಮೀಸಲಾತಿ ಪರಿಷ್ಕರಣ ನಡೆಸುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸಲಹೆಯನ್ನು ಬಿಜೆಪಿ ತಿರಸ್ಕರಿಸಿದೆ.
ಚುನಾವಣೆ ಸಂದರ್ಭದಲ್ಲಿ ಮೇಲ್ಜಾತಿ ಮತ್ತು ಕೀಳುಜಾತಿಗಳ ಮಧ್ಯದ ಸಂಘರ್ಷಕ್ಕೆ ಕಾರಣವಾಗುತ್ತದೆ ಮೀಸಲಾತಿ ನೀತಿಯನ್ನು ಪರಿಷ್ಕರಿಸುವ ಬಗ್ಗೆ ಬಿಜೆಪಿ ಒಲವು ಹೊಂದಿಲ್ಲವೆಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಭಾಗವತ್ ಹೇಳಿಕೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಆರೆಸ್ಸೆಸ್ ನಾಯಕರು, ಜಾತಿ ಆಧಾರಿತ ಮೀಸಲಾತಿ ಬೇಡ,ಪ್ರತಿಯೊಂದು ಸಮುದಾಯದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಮೀಸಲಾತಿ ನೀಡುವುದು ಸೂಕ್ತ ಎಂದು ಭಾಗವತ್ ಹೇಳಿರುವುದಾಗಿ ತಿಳಿಸಿದ್ದಾರೆ.
ಎನ್‌ಡಿಎ ಮೈತ್ರಿಕೂಟದ ಪಕ್ಷವಾದ ಆರ್‌ಎಲ್‌ಎಸ್‌ಪಿ, ಭಾಗವತ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ. ಕೆಲ ರಾಜಕೀಯ ಕಾರಣಗಳಿಂದ ಜಾತಿ ಆಧಾರಿತ ಮೀಸಲಾತಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದೆ.
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‌ರಿಂದ ಆದೇಶ ಪಡೆದಿರುವ ಪ್ರಧಾನಿ ಮೋದಿ, ಮೀಸಲಾತಿಯನ್ನು ರದ್ದುಗೊಳಿಸುವ ಸಂಚು ರೂಪಿಸುತ್ತಿದ್ದಾರೆ. ಆದರೆ, ಸಂಚು ಯಶಸ್ವಿಯಾಗಲು ಬಿಡುವುದಿಲ್ಲ ಎಂದು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗುಡುಗಿದ್ದಾರೆ.