Publish Date: Wed, 20 Apr 2016 (08:06 IST)
Updated Date: Wed, 20 Apr 2016 (08:10 IST)
ಬರ್ಮಾರ್ ಬಿಜೆಪಿ ಸಂಸದ ಸೋನಾರಾಂ ಚೌಧರಿಗೆ ಯುವಕನೊಬ್ಬ ಸೋಮವಾರ ಕಪಾಳಮೋಕ್ಷ ಮಾಡಿದ್ದಾನೆ. ವಿವಾಹ ಮಹೋತ್ಸವವೊಂದರಲ್ಲಿ ಪಾಲ್ಗೊಂಡಿದ್ದ ಸೋನಾರಾಂ ಜತೆ ವಾದಕ್ಕಿಳಿದಿದ್ದ ಯುವಕ ಖರ್ತಾರಾಂ ಆವೇಶದಲ್ಲಿ ಸಂಸದರ ಕೆನ್ನೆಗೆ ಬಾರಿಸಿದ್ದಾನೆ.
ಘಟನೆ ನಡೆದಾಗ ಜಿಲ್ಲಾಧಿಕಾರಿ ಮತ್ತು ಇತರ ಗಣ್ಯರು ಸಹ ಸ್ಥಳದಲ್ಲಿದ್ದರು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪಾರಿಸ್ ದೇಶ್‌ಮುಖ್ ತಿಳಿಸಿದ್ದಾರೆ.
ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ತೀವ್ರ ಶೋಧದ ಬಳಿಕ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬರ್ಮಾರ್ ಜಿಲ್ಲಾಧಿಕಾರಿ ಸುಧೀರ್ ಶರ್ಮಾ, ಘಟನೆ ನಡೆದಾಗ ನಾನು ಸ್ವಲ್ಪ ದೂರ ಸ್ಥಳದಲ್ಲಿದ್ದೆ. ಅಲ್ಲೇನು ನಡೆಯಿತೆಂದು ನನಗೆ ತಿಳಿಯಲಿಲ್ಲ. ಆದರೆ ಒಬ್ಬ ಮನುಷ್ಯ ಸಂಸದರನ್ನು ತಳ್ಳುತ್ತಿರುವುದನ್ನು ನಾನು ನೋಡಿದೆ ಎಂದಿದ್ದಾರೆ.
ಘಟನೆ ಕುರಿತು ಸೋನಾರಾಮ್ ಭದ್ರತಾ ಸಿಬ್ಬಂದಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದಾರೆ.
ಯುವಕ ಯಾವ ಕಾರಣಕ್ಕೆ ಆಕ್ರೋಶಗೊಂಡು ಸಂಸದರ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ. ಈ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.