ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರಕಾರ ನಿಜಾಮ್ ಸರಕಾರಗಿಂತಲೂ ಕೆಟ್ಟದಾಗಿವೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಗುಡುಗಿದ್ದಾರೆ.
ಅಂದಿನ ಹೈದ್ರಾಬಾದ್ ರಾಜ್ಯದ ಮುಸ್ಲಿಂ ರಾಜರಾಗಿದ್ದ ನಿಜಾಮ್ ಅವಧಿಯಲ್ಲಿ ಔರಂಗಾಬಾದ್ ಮತ್ತು ಮರಾಠವಾಡಾದ ಕೆಲ ಪ್ರದೇಶಗಳು ಕೂಡಾ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದವು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಹೊಂದಿರುವ ಶಿವಸೇನೆ, ಬಿಜೆಪಿ ವಿರುದ್ಧ ನಿರಂತರ ವಾಗ್ದಾಳಿ ಮುಂದುವರಿಸಿದೆ. ಬಿಜೆಪಿ ಸರಕಾರ ನಿಜಾಮ್‌ನ ಅಪ್ಪನ ಸರಕಾರದಂತಾಗಿದೆ ಎಂದು ರಾವತ್ ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಪ್ರಧಾನಿಯವರ ಬಗ್ಗೆ ಯಾವಾಗ ಕೇಳಿದರೂ ಸ್ವಿಟ್ಜರ್‌ಲೆಂಡ್, ಲಂಡನ್, ಫ್ರಾನ್ಸ್ ಇರಾನ್ ಅಥವಾ ಇನ್ನಾವುದೋ ದೇಶದಲ್ಲಿದ್ದಾರೆ ಎನ್ನುವುದು ಕೇಳಿಬರುತ್ತಿದೆ ಎಂದು ಲೇವಡಿ ಮಾಡಿದರು.
ಕಳೆದ ವಿಧಾನಸಭೆ ಚುನಾವಣೆಗಳಲ್ಲಿ ಪ್ರಧಾನಿ ಮೋದಿ ಬಿಜೆಪಿ ಅಸ್ತಿತ್ವವೇ ಇರದ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಲ್ಲಿ ಹಲವಾರು ಬಾರಿ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡರು. ಆದರೆ, ಬರಗಾಲ ಪೀಡಿತ ಮರಾಠವಾಡಾಕ್ಕೆ ಭೇಟಿ ನೀಡಲಿಲ್ಲ ಎಂದು ಕಿಡಿಕಾರಿದರು.
ಒಂದು ವೇಳೆ, ಪ್ರಧಾನಿ ಮೋದಿಯವರಿಗೆ ರೈತರ ಸಮಸ್ಯೆಗಳ ಬಗ್ಗೆ ನಿಜವಾದ ಕಾಳಜಿಯಿದ್ದಲ್ಲಿ ಮರಾಠವಾಡಕ್ಕೆ ಭೇಟಿ ನೀಡುತ್ತಿದ್ದರು ಎಂದರು.
ಭ್ರಷ್ಟಾಚಾರದ ಆರೋಪದ ಮೇಲೆ ರಾಜೀನಾಮೆ ನೀಡಿದ ಬಿಜೆಪಿ ಮುಖಂಡ ಮಾಜಿ ಸಚಿವ ಖಾಡ್ಸೆ ಹೆಸರನ್ನು ಬಳಸದೆ ಮಾತನಾಡಿದ ರಾವುತ್, ಬಿಜೆಪಿಯಲ್ಲಿ ನೀರಿನ ಗುಳ್ಳೆಗಳಿವೆ ಎಂದು ಶಿವಸೇನೆ ಹೇಳಿತ್ತು. ಅದರಂತೆ, ಇದೀಗ ಒಂದು ನೀರಿನ ಗುಳ್ಳೆ ಒಡೆದಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ವ್ಯಂಗ್ಯವಾಡಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.