ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪರಮಾಪ್ತ, ಆಜಾದ್ ಹಿಂದ್ ಫೌಜ್ ಸಂಘಟನೆಯ ಕೊನೆಯ ಯೋಧ ಡೇನಿಯಲ್ ಕಾಳೆ(95) ಶುಕ್ರವಾರ ಕೊಲ್ಲಾಪುರದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಕೆಲವು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಸಾವನ್ನಪ್ಪಿದರು. ನಿನ್ನೆ ಸಂಜೆಯೇ ಕದಮ್‌ವಾಡಿಯ ಚಿತಾಗಾರದಲ್ಲಿ ಅವರ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು. 'ವೈಟ್ ಆರ್ಮಿ' ನಾಗರಿಕ ರಕ್ಷಣಾ ಪಡೆ ಸ್ಥಾಪಕ ಅಶೋಕ ರೊಕಾಡೆ ಕಳೆದ 7 ವರ್ಷಗಳಿಂದ ಅವರನ್ನು ನೋಡಿಕೊಳ್ಳುತ್ತಿದ್ದರು.
1920 ಸೆಪ್ಟೆಂಬರ್‌ನಲ್ಲಿ ಕೊಲ್ಲಾಪುರದ ಪನ್ಹಾಲಾದಲ್ಲಿ ಜನಿಸಿದ್ದ ಕಾಳೆ 1942ರಲ್ಲಿ ರಾಸ್ ಬಿಹಾರಿ ಬೋಸ್ ಅವರ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್‌ನ್ನು ಸೇರಿದ್ದರು. ಬಳಿಕ ಈ ಲೀಗ್ ಸುಭಾಷ್ ಅವರ ಆಜಾದ್ ಹಿಂದ್ ಫೌಜ್‌ನಲ್ಲಿ ವಿಲೀನಗೊಂಡಿತ್ತು.
1947ರ ಬಳಿಕ ಅವರು ತಮ್ಮ ತವರು ಕೊಲ್ಲಾಪುರಕ್ಕೆ ಹಿಂತಿರುಗಿ ಅಲ್ಲೇ ನೆಲೆಯೂರಿದ್ದರು.
ಕಳೆದ ಕೆಲ ವರ್ಷಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಪತ್ನಿ ಶ್ಯಾಮಲಾ ದಶಕದ ಹಿಂದೆ ಸಾವನ್ನಪ್ಪಿದ ಬಳಿಕ ಅವರ ಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು.
ಆಗಾಗ ಆಜಾದ್ ಹಿಂದ್ ಫೌಜ್ ನೆನಪುಗಳನ್ನು ಮೆಲುಕು ಹಾಕುತ್ತಿದ್ದ ಅವರು ಶಾಂತಿ ಪ್ರಿಯ ವ್ಯಕ್ತಿಯಾಗಿದ್ದರು ಎಂದು ರೊಕಾಡೆ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ