ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಮಾರ್ಲೆನಾ ಅಧಿಕಾರ ಸ್ವೀಕರಿಸಲಿದ್ದಾರೆ. ಅಬಕಾರಿ ಅಕ್ರಮ ಹಗರಣದಲ್ಲಿ ಸಿಲುಕಿರುವ ಅರವಿಂದ್ ಕೇಜ್ರಿವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಮೊನ್ನೆಯಷ್ಟೇ ಕೇಜ್ರಿವಾಲ್ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು. ಜೈಲು ಸೇರಿದ್ದರೂ ಕೇಜ್ರಿವಾಲ್ ತಮ್ಮ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟಿರಲಿಲ್ಲ. ಆದರೆ ಮೊನ್ನೆ ಜಾಮೀನು ನೀಡುವಾಗ ಕೋರ್ಟ್ ಮುಖ್ಯಮಂತ್ರಿ ಕಚೇರಿಗೆ ಭೇಟಿ ನೀಡುವಂತಿಲ್ಲ, ಕಡತಗಳಿಗೆ ಸಹಿ ಹಾಕುವಂತಿಲ್ಲ ಎಂದು ಷರತ್ತು ವಿಧಿಸಿತ್ತು. ಇದರ ಬೆನ್ನಲ್ಲೇ ಕೇಜ್ರಿವಾಲ್ ಎರಡು ದಿನಗಳೊಳಗಾಗಿ ರಾಜೀನಾಮೆ ನೀಡುವುದಾಗಿ ಹೇಳಿದ್ದರು.
ಅದರಂತೆ ಇಂದು ಬೆಳಿಗ್ಗೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದ ಬಳಿಕ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಮಾರ್ಲೆನಾರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಅತಿಶಿ ಹೆಸರನ್ನು ಕೇಜ್ರಿವಾಲ್ ಘೋಷಿಸಿದರು. ಉಳಿದವರು ಅದನ್ನು ಅನುಮೋದಿಸಿದರು.
ಕೇಜ್ರಿವಾಲ್ ಜೈಲಿನಲ್ಲಿದ್ದಾಗಲೂ ಅತಿಶಿ ಸರ್ಕಾರದ ನೇತೃತ್ವ ವಹಿಸಿದ್ದರು. ಕೇಜ್ರಿವಾಲ್ ಅತ್ಯಾಪ್ತೆಯಾಗಿರುವ ಅತಿಶಿ ಈಗ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 43 ವರ್ಷದ ಅತಿಶಿ ಆಕ್ಸ್ ಫರ್ಡ ವಿವಿ ಪದವೀಧರೆ. ಇದುವರೆಗೆ ಕೇಜ್ರಿವಾಲ್ ಸರ್ಕಾರದಲ್ಲಿ ಪಿಡಬ್ಲ್ಯುಡಿ ಮತ್ತು ಪ್ರವಾಸೋದ್ಯಮ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.