Publish Date: Fri, 20 Mar 2026 (20:47 IST)
Updated Date: Fri, 20 Mar 2026 (20:51 IST)
ಕೊಲಂಬೋ: ಅಮೆರಿಕವು ತನ್ನ ಎರಡು ಯುದ್ಧ ವಿಮಾನಗಳನ್ನು ನಾಗರಿಕ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲು ಶ್ರೀಲಂಕಾದ ಬಳಿ ಅಮೆರಿಕ ಅನುಮತಿ ಕೇಳಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಸಂಸತ್ತಿನಲ್ಲಿ ಈ ವಿಚಾರ ತಿಳಿದು ಬಂದಿದ್ದು, ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಅವರು, ಎರಡು ಯುದ್ಧ ವಿಮಾನಗಳನ್ನು ನಿಲ್ಲಿಸಲು ಅನುಮತಿ ನೀಡುವಂತೆ ಅಮೆರಿಕ ಮನವಿ ಮಾಡಿದೆ. ಆದರೆ ನಮ್ಮ ತಟಸ್ಥ ನೀತಿಯನ್ನು ಕಾಪಾಡಿಕೊಳ್ಳಲು ನಾವು ಅನುಮತಿ ನೀಡಲಿಲ್ಲ ಎಂದು ಹೇಳಿದರು.
ಜಿಬೌಟಿಯ ನೆಲೆಯಿಂದ ಹೊರಟ ಎಂಟು ಹಡಗು ವಿರೋಧಿ ಕ್ಷಿಪಣಿಗಳಿದ್ದ ಎರಡು ಯುದ್ಧ ವಿಮಾನಗಳನ್ನು ಮಾರ್ಚ್ 4 ರಿಂದ 8 ರವರೆಗೆ ನಮ್ಮ ಮಟ್ಟಾಲಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲ್ಯಾಂಡ್ ಮಾಡಲು ಅಮೆರಿಕ ಕೇಳಿದೆ. ಆದರೆ ಶ್ರೀಲಂಕಾ ಮಿಲಿಟರಿ ಉದ್ದೇಶಕ್ಕಾಗಿ ವಿಮಾನಗಳ ಲ್ಯಾಂಡಿಂಗ್‌ಗೆ ನಾವು ಅನುಮತಿ ಕೊಡಲಿಲ್ಲ ಎಂದು ಮಾಹಿತಿ ನೀಡಿದರು.
ಹಲವು ಒತ್ತಡಗಳ ಹೊರತಾಗಿಯೂ ನಾವು ನಮ್ಮ ತಟಸ್ಥತೆಯನ್ನು ಕಾಪಾಡಿಕೊಳ್ಳಲು ಬಯಸುತ್ತೇವೆ. ಮಧ್ಯಪ್ರಾಚ್ಯ ಯುದ್ಧ ಸವಾಲುಗಳನ್ನು ಒಡ್ಡಿದ್ದರೂ ನಾವು ಯಾರ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದರು.