ಹಾರುತ್ತಿರುವ ವಿಮಾನದಿಂದ ಮಾನವ ತ್ಯಾಜ್ಯ ಕೆಳಕ್ಕೆ ಬಿದ್ದರೆ ಏನಾಗಬೇಡ? ಛೀ ಅಸಹ್ಯ ಎನ್ನುತ್ತಿರಾ? ಹೌದು ಕೆಲವು ವಿಮಾನಗಳು ಚಲಿಸುತ್ತಿರುವಾಗಲೇ ಮಾನವ ತ್ಯಾಜ್ಯವನ್ನು ಹೊರ ಚೆಲ್ಲುತ್ತಿವೆ. ಹೀಗಾಗಿ ಇಂತಹ ಸಂಸ್ಥೆಗಳಿಗೆ ದಂಡ ವಿಧಿಸುವಂತೆ ಹಸಿರು ನ್ಯಾಯಾಧೀಕರಣ ಪೀಠ ಆದೇಶಿಸಿದೆ.
ವಿಮಾನ ನೆಲದ ಮೇಲೆ ಇಳಿದ ನಂತರವೇ ಅದರಲ್ಲಿನ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕೆಂಬ ನಿಮಯವಿದ್ದರೂ, ಕೆಲ ಕಂಪನಿಗಳು ವಿಮಾನ ಹಾರಾಡುತ್ತಿರುವಾಗ ಎಲ್ಲೆಂದರಲ್ಲಿ ತ್ಯಾಜ್ಯದ ಟ್ಯಾಂಕ್ ಖಾಲಿ ಮಾಡಿಬಿಡುತ್ತವೆ.
ಹೀಗೆ ಖಾಲಿ ಮಾಡಲಾಗುವ ತ್ಯಾಜ್ಯ ತಮ್ಮ ಮನೆ ಸುತ್ತಮುತ್ತ ಬೀಳುತ್ತಿದೆ. ಇದರಿಂದ ನಮ್ಮ ಪ್ರದೇಶದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇದು ಸ್ವಚ್ಛ ಭಾರತ ಅಭಿಯಾನದ ಉಲ್ಲಂಘನೆ ಕೂಡ ಎಂದು ನಿವೃತ್ತ ಸೇನಾಧಿಕಾರಿ ಸತ್ವಂತ್ ಸಿಂಗ್ ದೂರು ನೀಡಿದ್ದರು.
ಅವರ ಅರ್ಜಿಯ ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠದ ಮುಖ್ಯ ನ್ಯಾಯಾಧೀಶರಾದ ಸ್ವತಂತರ್ ಕುಮಾರ್ ವಿಮಾನ ಯಾನ ಸಂಸ್ಥೆಗಳಿಗೆ ಕೆಲವು ಸೂಚನೆಗಳನ್ನು ನೀಡಿದೆ.
ಹಾರುವಾಗ ವಿಮಾನದಿಂದ ತ್ಯಾಜ್ಯವನ್ನು ಕೆಳಕ್ಕೆ ಚೆಲ್ಲುವಂತಿಲ್ಲ. ಲ್ಯಾಂಡ್ ಆಗುವಾಗ ಅಥವಾ ವಿಮಾನ ನಿಲ್ದಾಣದ ಟರ್ಮಿನಲ್‌ಗಳ ಬಳಿಯ ಪ್ರದೇಶದಲ್ಲಿ ಮಾನವ ತ್ಯಾಜ್ಯ ಹೊರಬೀಳದಂತೆ ಎಚ್ಚರಿಕೆ ವಹಿಸಬೇಕು. ಇದನ್ನು ಮೀರಿದರೆ 50,000 ರೂಪಾಯಿ ದಂಡ ವಿಧಿಸಬೇಕು ಎಂದು ಹಸಿರು ಪೀಠ ಆದೇಶಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ