ಪ್ರಧಾನಮಂತ್ರಿ ನರೇಂದ್ರ ಮೋದಿ ಅಮೆರಿಕದ ಯಶಸ್ವಿ ಪ್ರವಾಸ ಮುಗಿಸಿಕೊಂಡು ಭಾರತಕ್ಕೆ ಮರಳಿದ ಕೆಲವೇ ಗಂಟೆಗಳಲ್ಲಿ ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಅಮೆರಿಕದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೆಲ ದಶಕಗಳ ಹಿಂದೆ ಭಾರತದ ಆರ್ಥಿಕತೆಯ ಸಂಪೂರ್ಣ ನಿಯಂತ್ರಣ ಹೊಂದಿದ್ದ ಅಂದಿನ ಸೋವಿಯತ್ ಯುನಿಯನ್‌ನಂತೆ ಅಮೆರಿಕ ವರ್ತಿಸುತ್ತಿದೆ ಎಂದು ಗುಡುಗಿದ್ದಾರೆ.
ಸುಬ್ರಹ್ಮಣ್ಯಂ ಸ್ವಾಮಿ ಹೇಳಿಕೆಗಳು ಬಿಜೆಪಿಯ ಭಾರತ-ಅಮೆರಿಕ ಬಾಂಧವ್ಯದ ನಿಲುಗಳಿಗೆ ಸಂಪೂರ್ಣವಾಗಿ ವಿರೋಧವಾಗಿದ್ದು ಮತ್ತೊಂದು ವಿವಾದ ಸೃಷ್ಟಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ವಿಪಕ್ಷಗಳು ಸ್ವಾಮಿ ಹೇಳಿಕೆಯನ್ನು ಬ್ರಹ್ಮಾಸ್ತ್ರವಾಗಿ ಬಳಸುವ ಸಾಧ್ಯತೆಗಳಿವೆ.
ರಾಜ್ಯಸಭೆ ಸದಸ್ಯರಾದ ಸ್ವಾಮಿ ಟ್ವಿಟ್ಟರ್‌ನಲ್ಲಿ, 1968ರಿಂದ 1991ರ ವರೆಗೆ ಭಾರತದ ರಾಜಕೀಯ ಮತ್ತು ಆರ್ಥಿಕ ಹಾಗೂ ಅಧಿಕಾರಿ ವರ್ಗದ ಮೇಲೆ ಸೋವಿಯತ್ ಯುನಿಯನ್ ಹೊಂದಿದ್ದ ಹಿಡಿತದ ವಿರುದ್ಧ ನಾನು ಹೋರಾಟ ಮಾಡಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅಮೆರಿಕದ ಕುತಂತ್ರಗಳಿಗೆ ಬಲಿಯಾಗದೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಸ್ವಾಮಿ ಮತ್ತೊಂದು ಟ್ವಿಟ್ಟರ್ ಪೋಸ್ಟ್ ಮಾಡಿ, ಇದೀಗ ಸೋವಿಯತ್ ಯುನಿಯನ್ 16 ಭಾಗಗಳಾಗಿ ಒಡೆದು ಹೋಗಿದೆ. ಆದರೆ, ವಿಷಾದಕರ ಸಂಗತಿಯೆಂದರೆ ಅಮೆರಿಕ ಅಂದಿನ ಸೋವಿಯತ್ ಯುನಿಯನ್‌ನಂತೆ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ವಿರುದ್ಧ ಸಮರ ಸಾರಿರುವುದು ಕಂಡ ಬಿಜೆಪಿ ಹೈಕಮಾಂಡ್, ಸ್ವಾಮಿಯವರನ್ನು ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆ ಮಾಡಿತ್ತು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ