ನವದೆಹಲಿ : ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ` IAC ವಿಕ್ರಾಂತ್ ಅನ್ನು ಇಂದು ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ.
ಇದೇ ವೇಳೆ ಭಾರತೀಯ ನೌಕಾಪಡೆಯು ಹೊಸ ಧ್ವಜವನ್ನು ಪರಿಚಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಇಂದು ಧ್ವಜವನ್ನೂ ಅನಾವರಣಗೊಳಿಸಿದ್ದಾರೆ.
ಮರಾಠ ಸಾಮ್ರಾಜ್ಯದ ಚಕ್ರವರ್ತಿ ಶಿವಾಜಿಗೆ ಗೌರವ ಸೂಚಿಸುವ ಈ ಧ್ವಜವು ತಮ್ಮ ಆಳ್ವಿಕೆಯ ಕಾಲದಲ್ಲಿ ನೌಕಾಪಡೆಯನ್ನು ಹೊಂದಿದ್ದರು ಎಂಬುದನ್ನು ನೆಪಿಸುತ್ತದೆ. ಈ ನಿಟ್ಟಿನಲ್ಲಿಂದು ಭಾರತೀಯ ನೌಕಾಪಡೆಯು ಹೊಸ ಹೆಜ್ಜೆಯನ್ನಿರಿಸಿದೆ.
ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದರೂ, ಭಾರತೀಯ ನೌಕಾಪಡೆಯ ಧ್ವಜದಲ್ಲಿ ಇನ್ನೂ ಉಳಿದುಕೊಂಡಿದ್ದ ವಸಾಹತುಶಾಹಿ ನೆನಪಿಸುವ ಅಂಶಗಳಿಗೆ ಇಂದು ತೆರೆ ಎಳೆಯಲಾಗಿದೆ. ಹೊಸ ಧ್ವಜ ಪರಿಚಯಿಸುವ ಮೂಲಕ ಗುಲಾಮಗಿರಿಯ ಸಂಕೇತ, ವಸಾಹತುಶಾಹಿಯ ಕುರುಹುಗಳನ್ನು ತೆಗೆದುಹಾಕಲಾಗಿದೆ.
ಭಾರತೀಯ ಕಡಲ ಪರಂಪರೆಗೆ ಅನುಗುಣವಾಗಿ ಈ ನೌಕಾಧ್ವಜ ನಿರ್ಮಾಣಗೊಂಡಿದ್ದು, `ನಿಶಾನ್ ಎಂದು ಹೆಸರಿಡಲಾಗಿದೆ. ಇದು ರಕ್ಷಣಾ ವಲಯದಲ್ಲಿ ಆತ್ಮ ನಿರ್ಭರಕ್ಕೆ ಮತ್ತಷ್ಟು ಪುಷ್ಠಿ ನೀಡುವ ಉದ್ದೇಶವನ್ನೂ ಹೊಂದಿದೆ.