Publish Date: Tue, 21 Jul 2026 (09:42 IST)
Updated Date: Tue, 21 Jul 2026 (09:55 IST)
ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಯುವಜನಾಂಗದ ಬೃಹತ್ ಪ್ರತಿಭಟನೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಪೊಲೀಸರ ಭಾರಿ ಲಾಠಿ ಪ್ರಹಾರ, ಕಣ್ಣೀರು ಅನಿಲ ಪ್ರಯೋಗ ಮತ್ತು ವೇದಿಕೆಯನ್ನು ಧ್ವಂಸಗೊಳಿಸಿದ ಹೊರತಾಗಿಯೂ, ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಮತ್ತು ಅವರ ಬೆಂಬಲಿಗರು ಜಂತರ್ ಮಂತರ್ ಪ್ರತಿಭಟನಾ ಸ್ಥಳವನ್ನು ಮರುಸ್ವಾಧೀನಪಡಿಸಿಕೊಂಡು 'ಸಂಸತ್ ಚಲೋ' ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ.
ನೀಟ್ (NEET) ಪೇಪರ್ ಲೀಕ್ ಹಗರಣ ಹಾಗೂ ಶಿಕ್ಷಣ ವ್ಯವಸ್ಥೆಯ ಅಕ್ರಮಗಳನ್ನು ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಈ ಹೋರಾಟವು ಸದ್ಯ ಕೇಂದ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನದಂದು (ಜುಲೈ 20) ಸಾವಿರಾರು ವಿದ್ಯಾರ್ಥಿಗಳು ಸಂಸತ್ ಭವನದ ಕಡೆಗೆ ಮುನ್ನಡೆಯಲು ಯತ್ನಿಸಿದಾಗ ದೆಹಲಿ ಪೊಲೀಸರು ತೀವ್ರ ಲಾಠಿ ಪ್ರಹಾರ ನಡೆಸಿದ್ದರು. ಈ ಸಂಘರ್ಷದಲ್ಲಿ ನೂರಕ್ಕೂ ಹೆಚ್ಚು ಪೊಲೀಸರು ಹಾಗೂ ಭಾರಿ ಸಂಖ್ಯೆಯ ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಪೊಲೀಸರು ಜಂತರ್ ಮಂತರ್‌ನಲ್ಲಿದ್ದ ಪ್ರತಿಭಟನಾ ವೇದಿಕೆ ಹಾಗೂ ಸಾಮಗ್ರಿಗಳನ್ನು ತೆರವುಗೊಳಿಸಿದ್ದರೂ, ರಾತ್ರಿಯ ವೇಳೆಗೆ ಅಭಿಜಿತ್ ದಿಪ್ಕೆ, ಆಶುತೋಷ್ ರಂಕಾ, ಸೌರವ್ ದಾಸ್ ಮತ್ತು ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೊ ನೇತೃತ್ವದಲ್ಲಿ ಪ್ರತಿಭಟನಾಕಾರರು ಮತ್ತೆ ಸ್ಥಳದಲ್ಲೇ ಧರಣಿ ಕುಳಿತಿದ್ದಾರೆ.
ಅಭಿಜಿತ್ ದಿಪ್ಕೆ ಹೇಳಿಕೆ:
"ನಮ್ಮ ಶಾಂತಿಯುತ ಪ್ರತಿಭಟನೆಯನ್ನು ಬಲಪ್ರಯೋಗದ ಮೂಲಕ ಹತೋಟಿ ಮಾಡಲು ಸಾಧ್ಯವಿಲ್ಲ. ಯುವಕರ ಧ್ವನಿಯನ್ನು ಹೂತುಹಾಕಲು ಸರ್ಕಾರ ಯತ್ನಿಸುತ್ತಿದೆ. ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರುವವರೆಗೆ ಮತ್ತು ಶಿಕ್ಷಣ ಸಚಿವರು ರಾಜೀನಾಮೆ ನೀಡುವವರೆಗೆ ಸಂಸತ್ ಮಾರ್ಚ್ ಹಾಗೂ ಧರಣಿ ಮುಂದುವರಿಯಲಿದೆ" ಎಂದು ಸಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ.
ಮತ್ತೊಂದೆಡೆ, ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಕೇಂದ್ರ ಗೃಹ ಸಚಿವಾಲಯ ಹಾಗೂ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಸಿಜೆಪಿ ಪ್ರತಿನಿಧಿಗಳಾದ ಆಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ