ಮುಂಬೈ: ಮಹಾರಾಷ್ಟ್ರದ ದಯಾಬ್ ಮತ್ತು ಫಾತಿಮಾ ಎಂಬ ಮುಸ್ಲಿಂ ದಂಪತಿ ತಮ್ಮ ಮಗುವಿಗೆ ಮಹಾಲಕ್ಷ್ಮಿ ಎಂದು ನಾಮಕರಣ ಮಾಡಿದ್ದು, ದೇಶದಾದ್ಯಂತ ಗಮನ ಸೆಳೆದಿದೆ.
ಜೂನ್ 6ರಂದು ಕೊಲ್ಹಾಪುರ-ಮುಂಬೈ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್‌ನಲ್ಲಿ ಪತಿ ದಯಾಬ್ ಜೊತೆಗೆ ಪ್ರಯಾಣಿಸುತ್ತಿದ್ದ ಗರ್ಭಿಣಿ ಫಾತಿಮಾ (31) ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೆಲ ಕ್ಷಣದಲ್ಲೇ ಫಾತಿಮಾ ರೈಲಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ ರೈಲು ಹೆಸರು ಒಂದೆಡೆಯಾದರೆ ಇನ್ನೊಂದೆಡೆ ತಿರುಪತಿಯಿಂದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗುತ್ತಿದ್ದ ದಾರಿಯಲ್ಲೇ ಮಗು ಜನಿಸಿದ್ದರಿಂದ ದಂಪತಿ ಮಗುವಿಗೆ ಮಹಾಲಕ್ಷ್ಮಿ ಎಂದೇ ಹೆಸರಿಟ್ಟಿದ್ದಾರೆ ಎನ್ನಲಾಗಿದೆ.
ಹೆರಿಗೆ ನೋವಿನಿಂದ ನರಳುತ್ತಿದ್ದ ಫಾತಿಮಾ ಅವರಿಗೆ ರೈಲಿನಲ್ಲಿದ್ದ ಇತರ ಮಹಿಳಾ ಪ್ರಯಾಣಿಕರು ಸಹಾಯ ಮಾಡಿದ್ದಾರೆ. ತಕ್ಷಣ ಸಹ ಪ್ರಯಾಣಿಕರು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಮುಂದಿನ ನಿಲ್ಧಾಣ ಅಂದರೆ ಕರ್ಜತ್ ರೈಲು ನಿಲ್ದಾಣ ತಲುಪಿದಾಗ, ಅಧಿಕಾರಿಗಳು ತ್ವರಿತವಾಗಿ ಕಾರ್ಯನಿರ್ವಹಿಸಿ ತಾಯಿ ಮತ್ತು ಮಗುವನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಗು ಮತ್ತು ತಾಯಿ ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ
ಮಹಾಲಕ್ಷ್ಮಿ ಎಕ್ಸ್‌ಪ್ರೆಸ್‌ನಲ್ಲಿ ರೈಲಿನಲ್ಲಿಯೇ ಮಗು ಜನಿಸಿದ್ದು, ಜೊತೆಗೆ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಮಗು ಜನಿಸಿದ್ದರಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕರು ಮಗುವನ್ನು ಮಹಾಲಕ್ಷ್ಮಿಗೆ ಹೋಲಿಕೆ ಮಾಡಿದ್ದಾರೆ. ಅದಕ್ಕಾಗಿಯೇ ಮಗಳಿಗೆ ಮಹಾಲಕ್ಷ್ಮಿ ಎಂದು ಹೆಸರಿಡಲು ನಿರ್ಧರಿಸಿದ್ದೇನೆ ಎಂದು ಪತಿ ದಯಾಬ್ ಹೇಳಿದ್ದಾರೆ.<>