ಚಂಡೀಗಢ : ಗಣೇಶ ಮೂರ್ತಿ ವಿಸರ್ಜನೆ ವೇಳೆ ಏಳು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
ಘಟನೆಯಲ್ಲಿ ಸೋನಿಪತ್ನಲ್ಲಿ ಮೂವರು ಹಾಗೂ ಮಹೇಂದ್ರಗಢದ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 31 ರಂದು ಆರಂಭವಾದ ಗಣೇಶ ಚತುರ್ಥಿ ಹಬ್ಬ 10 ದಿನಗಳ ಬಳಿಕ ಮೂರ್ತಿಯನ್ನು ವಿಸರ್ಜನೆ ಮಾಡುವ ಮೂಲಕ ಅಂತ್ಯಗೊಂಡಿತು. ಗಣೇಶ ಮೂರ್ತಿಯನ್ನು ಭಕ್ತರು ಮೆರವಣಿಗೆ ಮಾಡಿ ನಂತರ ಸಮೀಪದಲ್ಲಿರುವ ಕೆರೆಗೆ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡಿದ್ದಾರೆ.
ಸೋನಿಪತ್ನ ಮಿಮಾರ್ಪುರ ಘಾಟ್ಗೆ ತಮ್ಮ ಮಗ ಮತ್ತು ಸೋದರಳಿಯನೊಂದಿಗೆ ಗಣೇಶ ಮೂರ್ತಿಯನ್ನು ವಿಸರ್ಜನಾ ಮಾಡಲು ತೆರಳಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದೀಗ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದೆಡೆ ಮಹೇಂದ್ರಗಢದಲ್ಲಿ, ಕನಿನಾ-ರೇವಾರಿ ರಸ್ತೆಯಲ್ಲಿರುವ ಜಗಡೋಲಿ ಗ್ರಾಮದ ಬಳಿಯ ಕಾಲುವೆಯ ಮೇಲೆ ಗಣೇಶನ ವಿಗ್ರಹವನ್ನು ವಿಸರ್ಜನಾ ಮಾಡಲು ಹೋದ ಸುಮಾರು ಒಂಬತ್ತು ಜನರು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದರು. ಅವರಲ್ಲಿ ತಡರಾತ್ರಿ ಎಂಟು ಜನರನ್ನು ಕಾಲುವೆಯಿಂದ ಹೊರತೆಗೆಯಲಾಯಿತು. ಈ ಪೈಕಿ ನಾಲ್ವರು ಸಾವನ್ನಪ್ಪಿದ್ದಾರೆ.