ನವದೆಹಲಿ : ಝೊಮ್ಯಾಟೋ ಕಂಪನಿಯ ಸಿಇಒ ದೀಪಿಂದರ್ ಗೋಯಲ್, ಸಂಸ್ಥೆಯ ಡೆಲಿವರಿ ಬಾಯ್ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 700 ಕೋಟಿ ರು. ದಾನ ಮಾಡಲು ನಿರ್ಧರಿಸಿದ್ದಾರೆ.
ಸ್ಟಾಕ್ ಓನರ್ಶಿಪ್ ಯೋಜನೆಯ ಅಂಗವಾಗಿ ತಮಗೆ ಲಭ್ಯವಾಗುವ ಸುಮಾರು 700 ಕೋಟಿ ರು.ಗಳನ್ನು ಗೋಯಲ್ ಅವರು ಝೊಮ್ಯಾಟೋ ಫ್ಮ್ಯಚರ್ ಸಂಸ್ಥೆಗೆ ವರ್ಗಾಯಿಸಲು ನಿರ್ಧರಿಸಿದ್ದಾರೆ.
ಝೊಮ್ಯಾಟೋ ಡೆಲಿವರಿ ಬಾಯ್ಗಳ ಗರಿಷ್ಠ ಇಬ್ಬರು ಮಕ್ಕಳ ಶಿಕ್ಷಣದ ವೆಚ್ಚವನ್ನು ಝೊಮ್ಯಾಟೋ ಫ್ಮ್ಯಚರ್ ಸಂಸ್ಥೆ ಪೂರೈಸಲಿದೆ. ಪ್ರತಿ ಮಗುವಿನ ಉನ್ನತ ಶಿಕ್ಷಣಕ್ಕಾಗಿ 5 ವರ್ಷಗಳವರೆಗೆ 50000 ರು ಒದಗಿಸಲಾಗುವುದು.
ಝೊಮ್ಯಾಟೋದಲ್ಲೇ 10 ವರ್ಷಕ್ಕೂ ಹೆಚ್ಚು ಕಾರ್ಯನಿರ್ವಹಿಸಿದ ಡೆಲಿವರಿ ಬಾಯ್ ಅವರ ಮಕ್ಕಳಿಗೆ ತಲಾ 1 ಲಕ್ಷ ರು. ಶಿಕ್ಷಣಕ್ಕಾಗಿ ಒದಗಿಸಲಾಗುವುದು. ಈ ಸಂಸ್ಥೆಯು ಹೆಣ್ಣುಮಕ್ಕಳಿಗಾಗಿ ವಿಶೇಷ ಯೋಜನೆ ಹೊಂದಿದ್ದು, 12 ನೇ ತರಗತಿ ಹಾಗೂ ಪದವಿ ಶಿಕ್ಷಣ ಪೂರೈಸಿದ ನಂತರ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಧನ ನೀಡಲಾಗುವುದು.
ಶಿಕ್ಷಣದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನವನ್ನೂ ನೀಡಲಾಗುವುದು ಎಂದು ಗೋಯಲ್ ಹೇಳಿದ್ದಾರೆ.