Publish Date: Mon, 22 Aug 2016 (13:00 IST)
Updated Date: Mon, 22 Aug 2016 (13:03 IST)
ಇದೊಂದು ಹೃದಯವಿದ್ರಾವಕ ಘಟನೆ. ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ, ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಬದಲಾಗಬೇಕಾಗಿದೆ, ಬಾಲ ಮನಸ್ಥಿತಿಯ ಮನಸ್ಸುಗಳ ಹದಗೆಡುತ್ತಿವೆ ಎಂಬುದೆಲ್ಲವನ್ನು ತೋರಿಸುತ್ತದೆ ಈ ಹೃದಯವಿದ್ರಾವಕ ಕಥೆ.
ರಾಜಸ್ಥಾನದ ಜೋಧ್ಪುರದ ಬಸ್ನಿ ಪ್ರದೇಶದ ನಿವಾಸಿಯಾದ ಕೂಲಿ ಕಾರ್ಮಿಕರ 7 ವರ್ಷದ ಮಗುವೊಂದು ಸ್ವಾತಂತ್ರ್ಯೋತ್ಸವದ ದಿನ ತನ್ನದೇ ಮನೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಾವು ಎಂದರೇನು ಎಂಬುದನ್ನರಿಯದ ಬಾಲಕಿ ಸಾವಿಗೆ ಶರಣಾಗಿದ್ದು ಕುಟುಂಬಸ್ಥರನ್ನು, ಸ್ಥಳೀಯರನ್ನಷ್ಟೇ ಅಲ್ಲದೇ ಪೊಲೀಸರನ್ನು ದಿಗ್ಭ್ರಮೆಗೊಳಗಾಗುವಂತೆ ಮಾಡಿತು.
ಶವವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದಾಗ ಬಹಿರಂಗವಾದ ಸತ್ಯ ಮತ್ತೂ ಘೋರವಾಗಿತ್ತು. ಮಗುವಿನ ಮೇಲೆ ಅತ್ಯಾಚಾರವಾಗಿರುವುದು ಸಾಬೀತಾಗಿತ್ತು. ತನಿಖೆ ನಡೆಸಿದಾಗ ಆಕೆಯ ಮನೆಯಲ್ಲಿ ವಾಸಿಸುವ ಅಪ್ರಾಪ್ತ ಬಾಲಕನೇ ಆಕೆಯ ಮೇಲೆ ಎರಡು ಬಾರಿ ಅತ್ಯಾಚಾರಗೈದಿರುವುದು ತಿಳಿದು ಬಂದಿದೆ.
ಇದರಿಂದ ನೊಂದ ಬಾಲಕಿ ಆಗಸ್ಟ್ 15 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.
ಘಟನೆಯ ಬಳಿಕ ಆರೋಪಿ ಬಾಲಕ ತಲೆ ಮರೆಸಿಕೊಂಡಿದ್ದಾನೆ.