ಮುಸ್ಲಿಂ ಸಮುದಾಯದಲ್ಲಿ ಪ್ರಚಲಿತದಲ್ಲಿರುವ ‘ಮೂರು ಬಾರಿ ತಲಾಖ್’ ಹೇಳುವ ಕ್ರಮದ ನಿಷೇಧಕ್ಕೆ ಒತ್ತಾಯಿಸಿ ಆರಂಭಿಸಿರುವ ರಾಷ್ಟ್ರವ್ಯಾಪಿ ಸಹಿ ಆಂದೋಲನಕ್ಕೆ ಬರೊಬ್ಬರಿ 50 ಸಾವಿರ ಮಂದಿ ಸಹಿ ಹಾಕಿದ್ದಾರೆ ಎಂದು ಬಿಎಮ್ಎಮ್ಎ (ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ) ತಿಳಿಸಿದೆ. ವಿಶೇಷವೆಂದರೆ ಅದರಲ್ಲಿ ಮುಸ್ಲಿಂ ಮಹಿಳೆಯರಷ್ಟೇ ಅಲ್ಲ ಪುರುಷರು ಸಹ ಸೇರಿದ್ದಾರೆ.
ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ, ಒಡಿಸಾ, ಪಶ್ಚಿಮ ಬಂಗಾಳ, ಬಿಹಾರ್, ಜಾರ್ಖಂಡ್, ಕೇರಳ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಈ ಆಂದೋಲನ ಪ್ರಾರಂಭವಾಗಿದ್ದು ಸದ್ಯದಲ್ಲಿಯೇ ಉಳಿದ ರಾಜ್ಯಗಳಿಗೂ ವಿಸ್ತರಿಸಲಿದೆ.
ಸುಮಾರು 50 ಸಾವಿರ ಪುರುಷರು ಹಾಗೂ ಮಹಿಳೆಯರು ಸಹಿ ಹಾಕುವ ಮೂಲಕ ನಮ್ಮ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ‘ಭಾರತೀಯ ಮುಸ್ಲಿಮ್ ಮಹಿಳಾ ಅಂದೋಲನ’ದ ಮುಖ್ಯಸ್ಥೆ ಝಕಿಯಾ ಸೋಮನ್ ತಿಳಿಸಿದ್ದಾರೆ.
ಟ್ರಿಪಲ್ ತಲಾಖ್ ಆಚರಣೆಗೆ ಕಾನೂನುಬದ್ಧ ನಿಷೇಧ ಹೇರಬೇಕು. ಇದು ಅನಿಯಂತ್ರಿತ ಮತ್ತು ಏಕ ಪಕ್ಷೀಯ. ಈ ಪದ್ಧತಿ ಕುರಿತು ಕುರಾನ್‌ನಲ್ಲಿ ಕೂಡ ಉಲ್ಲೇಖಿಸಲಾಗಿಲ್ಲ ಎಂದು ಬಿಎಮ್ಎಮ್ಎ ಕಳೆದ ವಾರ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿತ್ತು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.