ಕೊರೊನಾ ನಾಲ್ಕನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರತಿದಿನ ಪರೀಕ್ಷೆ ಪ್ರಮಾಣವನ್ನು 30 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಜೊತೆ ವೀಡಿಯೊ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಪ್ರಮಾಣ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಇದೆ. ಆದರೆ ಏಪ್ರಿಲ್ 9ರಿಂದ ಹೆಚ್ಚಳ ಕಂಡು ಬಂದಿದೆ ಎಂದರು.
ಸಭೆಯಲ್ಲಿ ಪ್ರಧಾನಿ ಮೋದಿ ಹಲವಾರು ಸಲಹೆ ನೀಡಿದ್ದಾರೆ. ಅವರ ಸಲಹೆ ಮೇರೆಗೆ ಟೆಸ್ಟಿಂಗ್, ಟ್ರ್ಯಾಕ್, ಟ್ರೀಟ್ ಮೆಂಟ್ ಮುಂತಾದ ನಾಲ್ಕು ಸೂತ್ರ ಪಾಲಿಸಲಿದ್ದೇವೆ. ಬೆಂಗಳೂರಿನಲ್ಲಿ ಪ್ರತಿದಿನ 10 ಸಾವಿರ ಹಾಗೂ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಒಟ್ಟಾರೆ 20 ಸಾವಿರ ಕೊರೊನಾ ಪರೀಕ್ಷೆ ಮಾಡಲಾಗುವುದು ಎಂದರು.
ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗುವುದು ಶೇ.2 ರಷ್ಟು ರ್ಯಾಂಡಮ್ ಟೆಸ್ಟ್ ಮಾಡಲಾಗುವುದು. ಯುರೋಪ್ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ವಹಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.
ಕೊರೊನಾ ನಾಲ್ಕನೇ ಅಲೆ ಎದುರಿಸಲು ರಾಜ್ಯ ಸರಕಾರ ಸಂಪೂರ್ಣ ಸಜ್ಜಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ 50 ಸಾವಿರ ಹಾಸಿಗೆ ವ್ಯವಸ್ಥೆ ಇದ್ದರೆ, 1 ಲಕ್ಷ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ ಇದೆ. ಇದರ ಜೊತೆ ಆಸ್ಪತ್ರೆಗಳಲ್ಲಿನ ಮೂಲ ಸೌಕರ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ವಿವರಿಸಿದರು.
ದೇಶದಲ್ಲಿ ಬಿಸಿಲು ಹೆಚ್ಚಾಗಿದೆ. ಅಗ್ನಿ ಅವಘಡಗಳು ಸಂಭವಿಸದಂತೆ ಆಸ್ಪತ್ರೆಗಳಲ್ಲಿ ಕೂಡ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಆಕ್ಸಿಜನ್ ವ್ಯವಸ್ಥೆಯನ್ನು 1300 ಮೆಟ್ರಿಕ್ ಟನ್ ಗೆ ಹೆಚ್ಚಿಸಲಿದ್ದೇವೆ ಎಂದು ಅವರು ಹೇಳಿದರು.