Publish Date: Thu, 16 Mar 2017 (07:51 IST)
Updated Date: Thu, 16 Mar 2017 (07:57 IST)
ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಜಗ್ತಿಯಾಲ್-ಹೈಯಾಮಾ ಗ್ರಾಮದಲ್ಲಿ ನಡೆದ ಎನ್`ಕೌಂಟರ್`ನಲ್ಲಿ ಮೂವರು ಲಷ್ಕರ್ ಇ ತೊಯಿಬಾ ಉಗ್ರರನ್ನ ಹೊಡೆದುರುಳಿಸಲಾಗಿದೆ. ಅದೇ ಪ್ರದೇಶದಲ್ಲಿ ಓಡಾಡುತ್ತಿದ್ದ 6 ವರ್ಷದ ಬಾಲಿಕಯೂ ಗುಂಡು ತಾಗಿ ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಾಯಗಳಾಗಿವೆ.
ಬುಧವಾರ ಬೆಳಗಿನ ಜಾವ ಹಳ್ಳಿಯಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ರಾಷ್ಟ್ರೀಯ ರೈಫಲ್, ಸಿಆರ್ಪಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ಪ್ರದೇಶವನ್ನ ಸುತ್ತುವರೆದಿತ್ತು. 8 ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರರ ಹೆಡೆಮುರಿ ಕಟ್ಟಲಾಗಿದೆ.
ಶೋಧ ಕಾರ್ಯಾಚರಣೆ ವೇಳೆ ಉಗ್ರರು ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದರು. ನಾವೂ ಸಹ ಪ್ರತಿ ದಾಳಿ ನಡೆಸಿದೆವು. ಉಗ್ರರನ್ನ ಕೊಂದಿದ್ದು, ಪೇದೆ ಡ್ಯಾನಿಶ್ ಅಹಮ್ಮದ್ ಗಾಯಗೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಗುಂಡು ತಾಗಿ ಮೃತಪಟ್ಟ ಬಾಲಕಿಯನ್ನ ಕನೀಜಾ ಎಂದು ಗುರ್ತಿಸಲಾಗಿದೆ. ಎನ್ ಕೌಂಟರ್ ಪ್ರದೇಶದಿಂದ 100 ಮೀಟರ್ ದೂರದಲ್ಲಿದ್ದ ಈ ಬಾಲಕಿಗೂ ಗುಂಡು ತಗುಲಿದೆ.