Select Your Language

Notifications

webdunia
webdunia
webdunia
webdunia

2ಜಿ ಹಗರಣದಲ್ಲಿ 63 ಆರೋಪಿಗಳ ವಿಚಾರಣೆ: ಸುಪ್ರೀಂಗೆ ಸಿಬಿಐ

2ಜಿ ಟೆಲಿಕಾಂ ಹಗರಣ
ನವದೆಹಲಿ , ಮಂಗಳವಾರ, 1 ಮಾರ್ಚ್ 2011 (15:25 IST)
ದೇಶವನ್ನೇ ಬೆಚ್ಚಿ ಬೀಳಿಸಿದ ಯುಪಿಎ ಸರಕಾರದ 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ, 10 ಟೆಲಿಕಾಂ ಸಂಸ್ಥೆಗಳ ಪ್ರೊಮೋಟರ್‌ಗಳು ಹಾಗೂ ಸಿಇಒಗಳೂ ಸೇರಿದಂತೆ ಒಟ್ಟು 63 ಮಂದಿಯ ವಿಚಾರಣೆ ನಡೆಸಲಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ಮಂಡಳಿ ಸಿಬಿಐ ಮಂಗಳವಾರ ಸುಪ್ರೀಂ ಕೋರ್ಟಿಗೆ ತಿಳಿಸಿತು. ಇದೇ ವೇಳೆ, ತನಿಖೆ ಸಾಗುತ್ತಿರುವ ಗತಿಯ ಬಗ್ಗೆ ಸುಪ್ರೀಂ ಕೋರ್ಟು ತೃಪ್ತಿ ವ್ಯಕ್ತಪಡಿಸಿತು.

ಜಸ್ಟೀಸ್ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಅವರನ್ನೊಳಗೊಂಡ ನ್ಯಾಯಪೀಠದೆದುರು ಹೇಳಿಕೆ ನೀಡಿದ, ಈ ಹಗರಣದಲ್ಲಿ ಪ್ರತಿವಾದಿಯೂ ಆಗಿರುವ ಕೇಂದ್ರ ಸರಕಾರವು, 2ಜಿ ಕೇಸಿನಲ್ಲಿ ಆರೋಪಿಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವ ಬಗ್ಗೆ ಒಲವು ಹೊಂದಿರುವುದಾಗಿ ತಿಳಿಸಿತು. ಇದಕ್ಕಾಗಿ, ಒಂದು ನ್ಯಾಯಾಲಯವನ್ನು ರಚಿಸಿ, ಅದಕ್ಕೊಬ್ಬ ನ್ಯಾಯಾಧೀಶರನ್ನು ನೇಮಿಸುವುದಕ್ಕಾಗಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಕೇಳಿಕೊಳ್ಳಲಾಗಿದೆ ಎಂದೂ ವರಿಷ್ಠ ನ್ಯಾಯಾಲಯಕ್ಕೆ ತಿಳಿಸಿತು.

ತನಿಖೆಯ ಪ್ರಗತಿ ಬಗ್ಗೆ ಕೇಳಿದ ನ್ಯಾಯಪೀಠಕ್ಕೆ ಈ ಕುರಿತು ಮಾಹಿತಿ ನೀಡಿದವರು ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್. ಸಿಬಿಐಯನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕೆ.ಕೆ.ವೇಣುಗೋಪಾಲ್ ಅವರು ಸಿಬಿಐ ತನಿಖೆಯ ಪ್ರಗತಿ ಕುರಿತ ವರದಿಯನ್ನು ನ್ಯಾಯಪೀಠಕ್ಕೆ ಒಪ್ಪಿಸಿದರು.

ಮುಂದಿನ ವಿಚಾರಣೆ ಮಾರ್ಚ್ 15ಕ್ಕೆ ನಡೆಯಲಿದೆ.

ಇದೇ ವೇಳೆ, ಟಾಟಾ ಸಮೂಹ ಸಂಸ್ಥೆಗಳ ಪರವಾಗಿ ವಾದಿಸುತ್ತಿರುವ ಹೀರಿಯ ವಕೀಲ ಹರೀಶ್ ಸಾಳ್ವೆ ಅವರು ನ್ಯಾಯಪೀಠಕ್ಕೆ ಮನವಿ ಸಲ್ಲಿಸಿ, ಕಲಾಪಗಳನ್ನು ಕ್ಯಾಮರಾದೆದುರು ನಡೆಸುವಂತೆ ಕೋರಿಕೆ ಮುಂದಿಟ್ಟರು.

Share this Story:

Follow Webdunia kannada