Select Your Language

Notifications

webdunia
webdunia
webdunia
webdunia

2ಜಿ: 30 ಮಂದಿಯ ಜೆಪಿಸಿ, ಮುಂಗಾರು ಅಧಿವೇಶನದಲ್ಲಿ ವರದಿ

ಜೆಪಿಸಿ
ನವದೆಹಲಿ , ಮಂಗಳವಾರ, 1 ಮಾರ್ಚ್ 2011 (16:54 IST)
ಸಂಸತ್‌ನ ಚಳಿಗಾಲದ ಅಧಿವೇಶನವನ್ನೇ ಬಲಿತೆಗೆದುಕೊಂಡಿದ್ದ 2ಜಿ ಹಗರಣ ಕುರಿತು ತನಿಖೆ ಸಂಬಂಧ ಕೊನೆಗೂ ಜೆಪಿಸಿ (ಜಂಟಿ ಸಂಸದೀಯ ಸಮಿತಿ) ರಚನೆಗೆ ಸರಕಾರ ಮುಂದಾಗಿದ್ದು, ಇದರಲ್ಲಿರುವ 30 ಸದಸ್ಯರ ಹೆಸರನ್ನು ಘೋಷಿಸಲಾಗಿದೆ.

ಜೆಪಿಸಿಯಲ್ಲಿ 20 ಲೋಕಸಭಾ ಸದಸ್ಯರು ಹಾಗೂ 10 ರಾಜ್ಯಸಭಾ ಸದಸ್ಯರು ಇರುತ್ತಾರೆ. ಲೋಕಸಭೆ ಸದಸ್ಯರಲ್ಲಿ 8 ಮಂದಿ ಕಾಂಗ್ರೆಸಿಗರು, ನಾಲ್ವರು ಬಿಜೆಪಿಯವರು.

ಸದಸ್ಯರು: ಕಾಂಗ್ರೆಸ್‌ನ ವಿ.ಕಿಶೋರ್, ಚಂದ್ರ ದೇವ್, ಪವನ್ ಸಿಂಗ್ ಘಾಟೋವಾರ್, ಜೈಪ್ರಕಾಶ್ ಅಗರ್ವಾಲ್, ದೀಪೇಂದರ್ ಸಿಂಗ್ ಹೂಡಾ, ಪಿ.ಸಿ.ಚಾಕೋ, ಮನೀಷ್ ತಿವಾರಿ, ನಿರ್ಮಲ್ ಖಾತ್ರಿ, ಅಧಿರ್ ರಂಜನ್ ಚೌಧುರಿ. ಬಿಜೆಪಿಯಿಂದ ಜಸ್ವಂತ್ ಸಿಂಗ್, ಯಶವಂತ ಸಿನ್ಹಾ, ಹರೀನ್ ಪಾಠಕ್, ಗೋಪೀನಾಥ್ ಮುಂಢೆ, ಡಿಎಂಕೆಯ ಟಿ.ಆರ್.ಬಾಲು, ತೃಣಮೂಲ ಕಾಂಗ್ರೆಸ್‌ನ ಕಲ್ಯಾಣ್ ಬ್ಯಾನರ್ಜೀ, ಜೆಡಿಯುನ ಶರದ್ ಯಾದವ್, ಬಿಎಸ್‌ಪಿಯ ದಾರಾ ಸಿಂಗ್ ಚೌಹಾಣ್, ಎಸ್‌ಪಿಯ ಅಖಿಲೇಶ್ ಯಾದವ್, ಸಿಪಿಐನ ಗುರುದಾಸ್ ದಾಸಗುಪ್ತ, ಬಿಜೆಡಿಯ ಅರ್ಜುನ್ ಚರಣ್ ಸೇಥಿ ಹಾಗೂ ಎಐಎಡಿಎಂಕೆಯ ಎಂ.ತಂಬಿದುರೈ.

ಟೆಲಿಕಾಂ ಸಚಿವ ಕಪಿಲ್ ಸಿಬಲ್ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಜೆಪಿಸಿ ರಚನೆಗೆ ಗೊತ್ತುವಳಿ ಮಂಡಿಸುತ್ತಾ, ನಾವೇನೂ ಮಾಡಿಲ್ಲ, ನಮ್ಮ ಯುಪಿಎಯು ಹಿಂದಿನ ಎನ್‌ಡಿಎ ಸರಕಾರದ ನೀತಿಗಳನ್ನಷ್ಟೇ ನಾವು ಅನುಸರಿಸಿದ್ದೇವೆ ಎಂದು ಹೇಳಿದರು.

ಬಿಜೆಪಿ ಸಹಿತ ಪ್ರತಿಪಕ್ಷಗಳು 17.6 ಲಕ್ಷ ಕೋಟಿ ರೂಪಾಯಿಯ, ಮಾಜಿ ಟೆಲಿಕಾಂ ಸಚಿವ, ಡಿಎಂಕೆಯ ಎ.ರಾಜಾ ಅವರಿಂದ ನಡೆದಿದೆ ಎನ್ನಲಾಗುತ್ತಿರುವ 2ಜಿ ಹಗರಣಕ್ಕೆ ಸಂಬಂಧಿಸಿ, ಸತ್ಯಾಂಶ ಹೊರಬರುವುದಕ್ಕೆ ಜೆಪಿಸಿಯೊಂದೇ ಸೂಕ್ತ ಮಾರ್ಗ ಎಂದು ವಾದಿಸುತ್ತಾ, ಸದನದ ಒಳಗೆ, ಹೊರಗೆ ತೀವ್ರ ಪ್ರತಿಭಟನೆ ನಡೆಸಿದ್ದವು. ಕೊನೆಗೂ ಪ್ರತಿಭಟನೆಗೆ ಮಣಿದ ಯುಪಿಎ ಸರಕಾರವು, ಫೆ.25ರಂದು ಜೆಪಿಸಿ ತನಿಖೆಗೆ ಸಮ್ಮತಿಸಿತ್ತು.

2ಜಿ ಹಗರಣದಿಂದಾಗಿ ಸರಕಾರದ ಬೊಕ್ಕಸಕ್ಕೆ ಚಿಕ್ಕಾಸೂ ನಷ್ಟವಾಗಿಲ್ಲ ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಸಿಬಲ್ ಅವರು ಗೊತ್ತುವಳಿ ಮಂಡಿಸುತ್ತಾ, 2001-09 ನಡುವಿನ ಯಾವುದೇ ಹಂತದಲ್ಲಿಯೂ ಯಾವುದೇ ಕಂಪನಿಗೆ ಹಣ ಸಂದಾಯವಾಗಿಲ್ಲ ಎಂದು ಹೇಳಿದರು. ಮಾತ್ರವಲ್ಲದೆ, 2008ರಲ್ಲಿ 2ಜಿ ಸ್ಪೆಕ್ಟ್ರಂ ಹಂಚಿಕೆಯ ಕುರಿತಾದ ನೀತಿಗಳಲ್ಲಿ ತಪ್ಪಿಲ್ಲ, ಆದರೆ ಅದರ ಅನುಷ್ಠಾನದಲ್ಲಿ ತಪ್ಪಾಗಿತ್ತು ಎಂಬ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆಯನ್ನು ಸಿಬಲ್ ಕೂಡ ಪುನರುಚ್ಚರಿಸಿದರು.

ಈ ಸಮಿತಿಯ ಸದಸ್ಯರಲ್ಲೇ ಅಧ್ಯಕ್ಷರು ಯಾರು ಎಂಬುದನ್ನು ಸ್ಪೀಕರ್ ಮೀರಾ ಕುಮಾರ್ ಅವರು ಘೋಷಿಸಲಿದ್ದಾರೆ. ಸಮಿತಿಯ ವರದಿಯನ್ನು ಮುಂಗಾರು ಅಧಿವೇಶನದ ಅಂತ್ಯದಲ್ಲಿ ಮಂಡಿಸಲಾಗುತ್ತದೆ.

Share this Story:

Follow Webdunia kannada