Select Your Language

Notifications

webdunia
webdunia
webdunia
webdunia

2ಜಿ ಹಗರಣ: ಜೆಪಿಸಿಗೆ ನಾನಿಲ್ಲ ಎಂದ ಅಭಿಷೇಕ್ ಮನು ಸಿಂಘ್ವಿ

ಜೆಪಿಸಿ
ನವದೆಹಲಿ , ಬುಧವಾರ, 2 ಮಾರ್ಚ್ 2011 (14:39 IST)
17.6 ಲಕ್ಷ ಕೋಟಿ ರೂಪಾಯಿಗಳ 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿ ತನಿಖೆಗೆ ನೇಮಿಸಲಾಗಿರುವ 30 ಮಂದಿ ಸಂಸದರ ಜಂಟಿ ಸಂಸದೀಯ ಸಮಿತಿಯಲ್ಲಿ ತಾನಿರುವುದಿಲ್ಲ ಎಂದಿದ್ದಾರೆ ಕಾಂಗ್ರೆಸ್ ಹಿರಿಯ ಮುಖಂಡ, ವಕ್ತಾರ ಅಭಿಷೇಕ್ ಮನು ಸಿಂಘ್ವಿ.

ರಾಜ್ಯಸಭೆಯಿಂದ ಜೆಪಿಸಿಗೆ 10 ಸದಸ್ಯರಲ್ಲಿ ಒಬ್ಬರಾಗಿ ಆಯ್ಕೆಗೊಂಡಿದ್ದ ಅವರು, ತಾನೀಗಾಗಲೇ ಸೆಲ್ಯುಲಾರ್ ಆಪರೇಟರ್ ಪರವಾಗಿ ಹಿರಿಯ ವಕೀಲರಾಗಿ ವಾದಿಸಿರುವುದರಿಂದ ಈ ತನಿಖಾ ಸಮಿತಿಯಲ್ಲಿ ಇರಲು ಬಯಸುವುದಿಲ್ಲ ಎಂದು ಸಿಂಘ್ವಿ ತಿಳಿಸಿದ್ದಾರೆ.

ನಾನು ಈಗಾಗಲೇ ಸೆಲ್ಯುಲಾರ್ ಆಪರೇಟರ್ ಪರವಾಗಿ ಕೋರ್ಟಿನಲ್ಲಿ ವಾದಿಸಿದ್ದೇನೆ ಮತ್ತು 2002ರಿಂದ 2004ರ ಅವಧಿಯಲ್ಲಿ ಎನ್‌ಡಿಎಯ ಪ್ರಮೋದ್ ಮಹಾಜನ್, ಅರುಣ್ ಶೌರಿ ಮತ್ತು ರಾಮ್ ವಿಲಾಸ್ ಪಾಸ್ವಾನ್ ಅವರು ಟೆಲಿಕಾಂ ಮಂತ್ರಿಗಳಾಗಿದ್ದಾಗಿನ ಟೆಲಿಕಾಂ ನೀತಿಗಳನ್ನು ಟೀಕಿಸಿದ್ದೇನೆ. ಹೀಗಾಗಿ ತನ್ನ ಹೆಸರು ಕೈಬಿಡುವಂತೆ ತಾನು ರಾಜ್ಯ ಸಭಾ ಅಧ್ಯಕ್ಷರಿಗೆ ಮನವಿ ಮಾಡಿದ್ದೇನೆ ಮತ್ತು ಇದಕ್ಕೆ ಸಮ್ಮತಿಯೂ ದೊರಕಿದೆ ಎಂದು ಕಾಂಗ್ರೆಸ್ ವಕ್ತಾರ ಸಿಂಘ್ವಿ ಹೇಳಿದರು.

ಸಿಂಘ್ವಿ ಸ್ಥಾನದಲ್ಲಿ ಕಾಂಗ್ರೆಸ್‌ನ ಮತ್ತೊಬ್ಬ ವಕ್ತಾರರಾದ, ತಮಿಳುನಾಡಿನವರೇ ಆಗಿರುವ ಜಯಂತಿ ನಟರಾಜನ್ ಆಯ್ಕೆಯಾಗಿದ್ದಾರೆ. ತಮಿಳುನಾಡಿನ ಡಿಎಂಕೆ ಮಂತ್ರಿಯಾಗಿದ್ದ ಎ.ರಾಜಾ ಅವರ ಹಗರಣಕ್ಕೆ ಸಂಬಂಧಿಸಿದಂತೆ ಜೆಪಿಸಿ ತನಿಖೆ ಒತ್ತಾಯಿಸಿ ಬಿಜೆಪಿ ಮತ್ತಿತರ ಪ್ರತಿಪಕ್ಷಗಳು ಸಂಸತ್ ಚಳಿಗಾಲದ ಅಧಿವೇಶನವೇ ನಡೆಯದಂತೆ ತಡೆಯೊಡ್ಡಿದ್ದವು. ಜೆಪಿಸಿಗೆ ಆಯ್ಕೆಯಾಗಿರುವ 10 ರಾಜ್ಯಸಭಾ ಸದಸ್ಯರಲ್ಲಿ ಕಾಂಗ್ರೆಸ್‌ನ ಪ್ರವೀಣ್ ರಾಷ್ಟ್ರಪಾಲ್ ಮತ್ತು ಪಿ.ಜೆ. ಕುರಿಯನ್ ಅವರಿದ್ದಾರೆ.

Share this Story:

Follow Webdunia kannada