ಅಹಮದಾಬಾದ್: ಗುಜರಾತ್‌ನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇದುವರೆಗೆ 15ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸುರಕ್ಷತೆ ದೃಷ್ಟಿಯಿಂದ 23,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಮತ್ತು ಕರಾವಳಿ ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಿಂದ 300 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.
ಬುಧವಾರ ಸತತ ನಾಲ್ಕನೇ ದಿನವೂ ಭಾರೀ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದು, ನಿರಂತರ ಮಳೆಯಿಂದಾಗಿ ಅಣೆಕಟ್ಟುಗಳು ಮತ್ತು ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ರಾಜ್ಯ ಪರಿಹಾರ ಇಲಾಖೆಯ ಪ್ರಕಾರ, ಸೋಮವಾರ ಮಳೆ ಸಂಬಂಧಿತ ಘಟನೆಗಳಲ್ಲಿ ಏಳು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದುವರೆಗೆ ಮೃತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಇದಲ್ಲದೆ, ಮೋರ್ಬಿಯ ಧವಾನಾ ಗ್ರಾಮದಲ್ಲಿ ಪ್ರವಾಹದ ಹೊಳೆಯಲ್ಲಿ ಅವರು ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್-ಟ್ರೇಲರ್ ಕೊಚ್ಚಿಹೋದ ನಂತರ ಭಾನುವಾರ ರಾತ್ರಿ ಕಾಣೆಯಾದ ಎಂಟು ಮಂದಿ ಪೈಕಿ ಮೂವರ ಶವಗಳು ಮಂಗಳವಾರ ಪತ್ತೆಯಾಗಿವೆ ಎಂದು ಮೊರ್ಬಿ ಕಲೆಕ್ಟರ್ ಕೆ ಬಿ ಜವೇರಿ ತಿಳಿಸಿದ್ದಾರೆ.
ಇನ್ನೂ ಐವರು ನಾಪತ್ತೆಯಾಗಿದ್ದಾರೆ ಮತ್ತು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ) ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ಅವರು ಹೇಳಿದರು.<>