ಸಿಕರ್: ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿ, 33 ಮಂದಿ ಗಂಭೀರ ಗಾಯಗೊಂಡಿರುವ ದುರ್ಘಟನೆ ನಡೆದಿದೆ.
ಲಕ್ಷ್ಮಣಗಢ ಪೊಲೀಸ್ ಠಾಣೆಯ ಸಹಾಯಕ ಸಬ್-ಇನ್‌ಸ್ಪೆಕ್ಟರ್ (ಎಎಸ್‌ಐ) ರಾಮದೇವ್ ಸಿಂಗ್ ಮಾತನಾಡಿ, ಪ್ರಯಾಣಿಕರನ್ನು ತುಂಬಿದ ಖಾಸಗಿ ಬಸ್ ಸಲಾಸರ್‌ನಿಂದ ನವಲ್‌ಗಢಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಚಾಲಕನ ನಿಯಂತ್ರಣ ತಪ್ಪಿದ ಬಸ್ ಲಕ್ಷ್ಮಣಗಢದ ಮೇಲ್ಸೇತುವೆಯೊಂದಕ್ಕೆ ಡಿಕ್ಕಿ ಹೊಡೆದಿದೆ. ಐವರು ಸ್ಥಳದಲ್ಲೇ ಮೃತಪಟ್ಟರೆ, ಮೂವರು ಪ್ರಯಾಣಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾರೆ. ಇದುವರೆಗೆ ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ರಾಮ್‌ದೇವ್ ಸಿಂಗ್ ತಿಳಿಸಿದ್ದಾರೆ.
"ಮಾಹಿತಿ ಪಡೆದ ನಂತರ, ನಾವು ಸ್ಥಳಕ್ಕೆ ತಲುಪಿದ್ದೇವೆ ಮತ್ತು ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಶವಗಳನ್ನು ಶವಾಗಾರದಲ್ಲಿ ಇರಿಸಲಾಗಿದೆ" ಎಂದು ಮಾಹಿತಿ ನೀಡಿದರು.
ನಾಗೌರ್ ಸಂಸದ ಹನುಮಾನ್ ಬೇನಿವಾಲ್ ಈ ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. "ಸಿಕಾರ್ ಜಿಲ್ಲೆಯ ಲಕ್ಷ್ಮಣಗಢ ಪ್ರದೇಶದಲ್ಲಿ ಬಸ್ ಅಪಘಾತದಿಂದ ಜೀವಹಾನಿ ದುಃಖದ ಸುದ್ದಿಯಾಗಿದೆ. ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಗಾಯಾಳುಗಳಿಗೆ ಶೀಘ್ರ ಚೇತರಿಸಿಕೊಳ್ಳಲಿ" ಎಂದು ಬೆನಿವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.<>