Select Your Language

Notifications

webdunia
webdunia
webdunia
webdunia

ಸತ್ಯ ಸಾಯಿಬಾಬಾ ಆಸ್ಪತ್ರೆಗೆ; ತೀವ್ರ ಆತಂಕ ದಲ್ಲಿ ಭಕ್ತರು

ಶ್ರೀ ಸತ್ಯ ಸಾಯಿಬಾಬಾ
ಹೈದರಾಬಾದ್ , ಮಂಗಳವಾರ, 29 ಮಾರ್ಚ್ 2011 (13:24 IST)
ನ್ಯುಮೋನಿಯಾ ಸಮಸ್ಯೆಯಿಂದ ಉಸಿರಾಟದ ತೊಂದರೆ ಎದುರಿಸಿದ ವಿಶ್ವಪ್ರಸಿದ್ಧ ಧರ್ಮಗುರು, ದೇವಮಾನವ ಪುಟ್ಟಪರ್ತಿ ಶ್ರೀ ಸತ್ಯ ಸಾಯಿಬಾಬಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಹೇಳಿಕೆ ನೀಡಿರುವ ಹೊರತಾಗಿಯೂ ಭಕ್ತರು ತೀವ್ರ ಆತಂಕಕ್ಕೀಡಾಗಿದ್ದಾರೆ.

ಸಾಯಿಬಾಬಾ ಅವರನ್ನು ಸೋಮವಾರವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪರಾಹ್ನದ ಹೊತ್ತಿಗೆ ನ್ಯುಮೋನಿಯಾ ಸಮಸ್ಯೆಯಿಂದಾಗಿ ಉಸಿರಾಟ ತೊಂದರೆ ಎದುರಾಗಿತ್ತು. ಹೃದಯ ಬಡಿತ ನಿಧಾನವಾಗಿದೆ ಎಂದು ಅವರು ಹೇಳಿಕೊಂಡ ನಂತರ ತಕ್ಷಣವೇ ಪ್ರಶಾಂತಿ ಗ್ರಾಮದ ಆಸ್ಪತ್ರೆಗೆ ದಾಖಲಿಸಲಾಯಿತು.

ಸಾಯಿಬಾಬಾ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅನಂತಪುರದಲ್ಲಿನ ಸಾಯಿಬಾಬಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಸತ್ಯ ಸಾಯಿಬಾಬಾ ಅವರ ಹೃದಯ ಬಡಿತದ ಪ್ರಮಾಣ ಪ್ರತಿ ನಿಮಿಷಕ್ಕೆ 60ರೊಳಗೆ ಇಳಿಕೆಯಾಗಿತ್ತು. ತಲೆಸುತ್ತು ಕೂಡ ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಇಲ್ಲಿ ಅವರಿಗೆ ಶಾಶ್ವತ ವೇಗ ನಿಯಂತ್ರಕವನ್ನು ಜೋಡಿಸಲಾಗಿದೆ. ವೈದ್ಯಕೀಯ ಮಾಹಿತಿಗಳ ಪ್ರಕಾರ ಅವರ ಆರೋಗ್ಯವೀಗ ಸ್ಥಿರವಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಎ.ಎನ್. ಸಫಾಯಾ ಹೇಳಿಕೆ ನೀಡಿದ್ದಾರೆ.

ಸಾಯಿಬಾಬಾ ಅವರು ಅನಾರೋಗ್ಯಕ್ಕೊಳಗಾಗಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಪುಟ್ಟಪರ್ತಿ ಸೇರಿದಂತೆ ವಿವಿಧೆಡೆ ಭಕ್ತರು ತೀವ್ರ ಆತಂಕಕ್ಕೊಳಗಾದರು. ಪುಟ್ಟಪರ್ತಿಯಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಭಕ್ತರು ಆಸ್ಪತ್ರೆಯತ್ತ ಆತಂಕದಿಂದ ಧಾವಿಸುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.

ಸಾಯಿಬಾಬಾ ಅವರು ಶೀಘ್ರ ಗುಣಮುಖರಾಗಲಿ ಎಂದು ಭಕ್ತರು ಪ್ರಾರ್ಥನೆ, ಭಜನೆ ಕೂಡ ಮಾಡುತ್ತಿದ್ದಾರೆ. ವಿದೇಶಿ ಭಕ್ತರು ಕೂಡ ಸಾಯಿಬಾಬಾ ಅವರನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದು ವರದಿಗಳು ಹೇಳಿವೆ.

ಸಾಯಿಬಾಬಾ ಅವರ ಆರೋಗ್ಯ ಸುಧಾರಿಸುತ್ತಿದೆ. ಅವರನ್ನು ವೈದ್ಯಕೀಯ ಸುಪರ್ದಿಯಲ್ಲಿ ಇಡಲಾಗಿದೆ. ಅವರ ಆರೋಗ್ಯದ ಬಗ್ಗೆ ಭಕ್ತರು ಚಿಂತೆಗೀಡಾಗ ಬೇಕಾದ ಅಗತ್ಯವಿಲ್ಲ. ಶೀಘ್ರದಲ್ಲೇ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಶ್ರೀ ಸತ್ಯಸಾಯಿ ಟ್ರಸ್ಟ್‌ನ ರತ್ನಾಕರ್ ತಿಳಿಸಿದ್ದಾರೆ.

Share this Story:

Follow Webdunia kannada