Select Your Language

Notifications

webdunia
webdunia
webdunia
webdunia

ವಿದೇಶಿ ರಾಯಭಾರಿಗಳ ಜತೆ ಮಾತಿನಲ್ಲಿ ಎಚ್ಚರಿಕೆ: ಆಂಟನಿ

ವಿಕಿಲೀಕ್ಸ್
ನವದೆಹಲಿ , ಶನಿವಾರ, 19 ಮಾರ್ಚ್ 2011 (08:59 IST)
ವಿಕಿಲೀಕ್ಸ್ ರಹಸ್ಯ ದಾಖಲೆಗಳ ಸತ್ಯಾಸತ್ಯತೆಯ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಲೇ ಮಾತಿಗಿಳಿದಿರುವ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಕ್ಷಣಾ ಸಚಿವ ಎ.ಕೆ. ಆಂಟನಿ, ವಿದೇಶಗಳು ಮತ್ತು ವಿದೇಶಿ ರಾಯಭಾರಿಗಳ ಜತೆಗಿನ ವ್ಯವಹಾರಗಳಲ್ಲಿ ಜಾಗರೂಕರಾಗಿರುವಂತೆ ಜನತೆಗೆ ಕರೆ ನೀಡಿದ್ದಾರೆ.

2008ರಲ್ಲಿ ಎಡಪಕ್ಷಗಳು ಅಮೆರಿಕಾ ಜತೆಗಿನ ಅಣು ಒಪ್ಪಂದ ವಿರೋಧಿಸಿ ಸರಕಾರದಿಂದ ಬೆಂಬಲ ವಾಪಸ್ ಪಡೆದುಕೊಂಡ ನಂತರ ವಿಶ್ವಾಸ ಮತ ಎದುರಾದ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರದ ಬೆಂಬಲಕ್ಕಾಗಿ ಇತರ ಪಕ್ಷಗಳ ಸಂಸದರಿಗೆ ಲಂಚ ನೀಡಿತ್ತು ಎಂದು ವಿಕಿಲೀಕ್ಸ್ ದಾಖಲೆಗಳು ಆರೋಪಿಸಿದ್ದವು.

ಈ ಬಗ್ಗೆ ಮಾತನಾಡಿರುವ ಆಂಟನಿ, ನನ್ನ ಸ್ವಂತ ಅನುಭವದಿಂದ ಹೇಳುವುದಾದರೆ ವಿದೇಶಗಳು ಎಷ್ಟೇ ನಂಬಿಕೆಗೆ ಅರ್ಹವಾದರೂ ಅವುಗಳ ಜತೆ ವ್ಯವಹರಿಸುವಾಗ ನಾವು ಸಾಧ್ಯವಾದಷ್ಟು ಎಚ್ಚರಿಕೆ ವಹಿಸಬೇಕು ಎಂದು ಸೇನೆಯ ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯಪಟ್ಟರು.

ವಿಕಿಲೀಕ್ಸ್ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನು ಎಂಬ ಪತ್ರಕರ್ತರ ಪ್ರಶ್ನೆಗೆ, ಅದರ ಸತ್ಯಾಸತ್ಯತೆ ಬಗ್ಗೆ ನಾನು ಏನೂ ಹೇಳಲಾರೆ ಎಂದಷ್ಟೇ ಹೇಳಿ ನುಣುಚಿಕೊಂಡರು.

ಕಾಸಿಗಾಗಿ ಓಟು ಹಗರಣವು 2008ರಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಮೂವರು ಬಿಜೆಪಿ ಸಂಸದರು ಸಂಸತ್ತಿನಲ್ಲೇ ನೋಟಿನ ಕಂತೆಗಳನ್ನು ಪ್ರದರ್ಶಿಸಿ, ಇದು ಕಾಂಗ್ರೆಸ್ ಕೊಟ್ಟದ್ದು ಎಂದು ಗಲಾಟೆ ಎಬ್ಬಿಸಿದ್ದರು. ಆದರೆ ಇದನ್ನು ಕಾಂಗ್ರೆಸ್ ಮತ್ತು ಸರಕಾರ ನಿರಾಕರಿಸುತ್ತಲೇ ಬಂದಿತ್ತು. ಈ ಕುರಿತು ನಡೆಸಿದ ತನಿಖೆ ಕೂಡ ಯಾವುದೇ ಮಹತ್ವದ ಫಲಿತಾಂಶ ನೀಡಿರಲಿಲ್ಲ.

ಆದರೆ ಈಗ ವಿಕಿಲೀಕ್ಸ್ ಈ ಕುರಿತು ಹಲವು ವಿಚಾರಗಳನ್ನು ಬಹಿರಂಗಪಡಿಸಿದೆ. 'ಕಾಸಿಗಾಗಿ ಓಟು' ಪ್ರಸಂಗದ ಹಿಂದೆ ಕೆಲಸ ಮಾಡಿದ ಕಾಂಗ್ರೆಸ್ ನಾಯಕರುಗಳ ಹೆಸರುಗಳನ್ನು ಬಿಡುಗಡೆಗೊಳಿಸಿದೆ. ಇದರಿಂದ ತೀವ್ರ ಮುಜುಗರಕ್ಕೀಡಾಗಿರುವ ಪಕ್ಷ, ಆರೋಪಗಳನ್ನು ಸಾಬೀತುಪಡಿಸುವಂತೆ ಪ್ರತಿಪಕ್ಷಗಳಿಗೆ ಸವಾಲು ಹಾಕುತ್ತಿದೆ.

ವಿಕಿಲೀಕ್ಸ್ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಅದನ್ನು ನಮ್ಮ ನೆಲದ ಕಾನೂನು ಒಪ್ಪಲು ಕೂಡ ಸಾಧ್ಯವಿಲ್ಲ. ಪ್ರತಿಪಕ್ಷಗಳು ತಮ್ಮ ಲಾಭಕ್ಕಾಗಿ ಕೀಳು ರಾಜಕೀಯ ಮಾಡುತ್ತಿವೆ. ಬಿಜೆಪಿ ಅಥವಾ ಎಡಪಕ್ಷಗಳು ಈ ದಾಖಲೆಗಳನ್ನು ರುಜುವಾತುಪಡಿಸಲಿ. ನಂತರ ನಾವು ನೋಡಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಸರಕಾರವನ್ನು ಸಮರ್ಥಿಸಿಕೊಂಡಿದ್ದಾರೆ.

Share this Story:

Follow Webdunia kannada