ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಕಿಸ್ತಾನೀಯರು ಪಾಲ್ಗೊಳ್ಳುವ ಬಗೆಗಿನ ಬಾಲಿವುಡ್ ಸೂಪರ್‌ಸ್ಟಾರ್ ಶಾರೂಖ್ ಖಾನ್ ಮಾತುಗಳು ಶಿವಸೇನೆ ವರಿಷ್ಠ ಬಾಳ್ ಠಾಕ್ರೆಯವರಿಗೆ ಅಪಥ್ಯವಾಗಿ ವಿವಾದ ಉಂಟಾದ ನಂತರ ಇದೀಗ ಮತ್ತೊಂದು ಸುತ್ತಿನ ಕದನ ಲಕ್ಷಣಗಳು ಗೋಚರಿಸಿವೆ. ಮುಸ್ಲಿಂ ನಟರು ಮುಂಬೈಯನ್ನು 'ಬಾಂಬೆ' ಎನ್ನುವಂತಿಲ್ಲ ಎಂದು ಶಾರೂಖ್ ಹೇಳಿರುವುದೇ ಈಗಿನ ವಿವಾದ.
'ಇಂಡಿಯಾ ಟುಡೇ ಶೃಂಗ'ದಲ್ಲಿ ಭಾಗವಹಿಸಿದ್ದ 45ರ ಹರೆಯದ ನಟ, ಬಾಳ್ ಠಾಕ್ರೆಯವರ ಹೆಸರನ್ನು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಕೋಮುವಾದ ಮತ್ತು ಭಾರತದ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ನೀಡುತ್ತಿರುವುದರ ಬಗ್ಗೆ ವಿಶ್ಲೇಷಣೆ ನಡೆಸಿದರು.
ಭಾರತದ ಸಿನಿಮಾ ಈಗ ಮುಂಬೈಯಿಂದ ಮೆಲ್ರೋಸ್ (ಬ್ರಿಟನ್‌ನ ಒಂದು ಪುಟ್ಟ ನಗರ) ತನಕ ಹೋಗುತ್ತಿದೆ. ವಿದೇಶಗಳ ನಿರ್ಮಾಪಕ, ನಿರ್ದೇಶಕರುಗಳು ಭಾರತ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ನಾನು 'ಬಾಂಬೆಯಿಂದ ಬವೆರ್ಲಿ ಹಿಲ್ಸ್'ವರೆಗೆ (ಅಮೆರಿಕಾದ ಒಂದು ಪುಟ್ಟ ನಗರ) ಎಂದು ಹೇಳಲು ಹೆಚ್ಚು ಒತ್ತು ನೀಡುತ್ತೇನೆ. ಆದರೆ ಈ ರೀತಿಯ ಆದಿ ಪ್ರಾಸಗಳನ್ನು ಬಳಸಲು ಮುಸ್ಲಿಂ ಕಲಾವಿದರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದರು.
'ಬಾಂಬೆ'ಗೆ 'ಮುಂಬೈ' ಎಂದು ಮರು ನಾಮಕರಣ ಮಾಡಿದ ನಂತರವೂ ಬಾಂಬೆ ಎಂದು ಬಳಸುತ್ತಿರುವವರ ವಿರುದ್ಧ ಇತ್ತೀಚಿನ ವರ್ಷಗಳಲ್ಲಿ ಠಾಕ್ರೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಇದನ್ನೇ ಶಾರೂಖ್ ಪರೋಕ್ಷವಾಗಿ ಉಲ್ಲೇಖಿಸಿದರು.
ಧರ್ಮ ಮತ್ತು ರಾಜಕೀಯವನ್ನು ಯಾವ ಕಾರಣಕ್ಕೂ ಬೆರೆಸಬಾರದು ಎಂದ ಶಾರೂಖ್, ಕೋಮುವಾದವನ್ನು ಕೀಳು ಸ್ಥಾನ ಎಂದು ಅಭಿಪ್ರಾಯಪಟ್ಟರು.
ರಾಜಕಾರಣಿಗಳು ಧರ್ಮವನ್ನು ತಮ್ಮ ದಾಳವನ್ನಾಗಿ ಬಳಸಬಾರದು ಎಂದು ಪ್ರತಿಪಾದಿಸುವವನು ನಾನು. ಅದು ಸ್ವೀಕಾರಾರ್ಹವಲ್ಲ. ಇದರಿಂದಾಗಿ ನೈಜ ಅಗತ್ಯ ರಾಜಕೀಯ ವಿಚಾರಗಳಾಗಿರುವ ಶಿಕ್ಷಣ, ಪ್ರಗತಿ ಮತ್ತು ಮಹಿಳೆಯರ ಶ್ರೇಯೋಭಿವೃದ್ಧಿ ಮುಂತಾದುವು ಮೂಲೆಗುಂಪಾಗಿವೆ ಎಂದರು.
'ನಾನೊಬ್ಬ ಮುಸ್ಲಿಂ. ನಾನು ಮದುವೆಯಾಗಿರುವುದು ಹಿಂದೂ ಮಹಿಳೆಯನ್ನು (ಗೌರಿ). ನನ್ನ ಮಕ್ಕಳಿಗೆ ಎಲ್ಲಾ ಧರ್ಮಗಳೂ ಗೊತ್ತು. ಇದರ ಬಗ್ಗೆ ತಿಳಿದಿರಬೇಕು ಎನ್ನುವುದು ನನ್ನ ಪ್ರಜ್ಞಾಪೂರ್ವಕ ನಿರ್ಧಾರ. ಧರ್ಮ ಎನ್ನುವುದು ವೈಯಕ್ತಿಕ ವಿಚಾರ. ನೀವು ಮತ್ತು ನಿಮ್ಮ ದೇವರ ನಡುವೆ ಮಧ್ಯ ಪ್ರವೇಶಿಸಲು ಈ ವಿಶ್ವದಲ್ಲಿ ಯಾರಿಗೂ ಅಧಿಕಾರವಿಲ್ಲ' ಎಂದು ವಿವರಣೆ ನೀಡಿದರು.