2008ರ ಮುಂಬೈ ದಾಳಿ ಮಾಡಿರುವುದು ಪಾಕಿಸ್ತಾನೀಯರು ಎಂಬುದರಲ್ಲಿ ಯಾವುದೇ ಸಂಶಯಗಳಿಲ್ಲ ಎಂದು ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಹೇಳಿದ್ದರೆ, ಇನ್ನೂ ಕೆಲವರು, ಆ ದಾಳಿಕೋರರು ದಕ್ಷಿಣ ಭಾರತೀಯರಂತೆ ಕಾಣುತ್ತಿದ್ದರು ಎಂದು ಶಂಕೆ ವ್ಯಕ್ತಪಡಿಸಿರುವ ಮಾಹಿತಿಗಳು ವಿಕಿಲೀಕ್ಸ್ ಮೂಲಕ ಬಹಿರಂಗವಾಗಿದೆ.
ಮುಂಬೈ ದಾಳಿಯ ಮೂಲ ಪಾಕಿಸ್ತಾನ ಆಗಿರಬಹುದು ಎಂಬುದನ್ನು ಪಾಕಿಸ್ತಾನದ ಕೆಲವು ಪಂಜಾಬಿಗಳು ನಂಬಿರುವ ಹೊರತಾಗಿಯೂ, ಅಲ್ಲಿನ ರಾಜಕಾರಣಿಗಳು ಮತ್ತು ವಕೀಲರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭಾರತವು ತನ್ನ ಆಂತರಿಕ ತೀವ್ರವಾದಿ ಗುಂಪುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಈ ದಾಳಿಗೆ ಅವರೇ ಕಾರಣ ಎಂದು ಹೇಳಿದ್ದರು.
ಮುಂಬೈ ದಾಳಿ ಹಿಂದೆ ಪಾಕಿಸ್ತಾನೀಯರಿದ್ದಾರೆ ಎಂದು ದಾಳಿಯ ಬೆನ್ನಿಗೆ ಪ್ರಧಾನಿ ಮನಮೋಹನ್ ಸಿಂಗ್ ಆರೋಪಿಸಿದ ಬೆನ್ನಿಗೆ ಪಾಕಿಸ್ತಾನದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಭಾರತದಲ್ಲೇ ಸಾಕಷ್ಟು ತೀವ್ರವಾದಿಗಳ ಗುಂಪಿವೆ. ಅವುಗಳದ್ದೇ ಕೃತ್ಯವಿದು ಎಂಬ ಪ್ರತ್ಯಾರೋಪಗಳೂ ಕೇಳಿ ಬಂದಿದ್ದವು.
ಪಂಜಾಬ್ ಹೈಕೋರ್ಟ್ ನ್ಯಾಯಾಧೀಶ ಬಿಲಾಲ್ ಖಾನ್ ಅವರ ಜತೆಗಿನ ಮಾತುಕತೆ ಸಂದರ್ಭದಲ್ಲಿ ಹಿರಿಯ ವಕೀಲರೊಬ್ಬರು, ಮುಂಬೈ ದಾಳಿ ದಕ್ಷಿಣ ಭಾರತೀಯರ ಕೃತ್ಯ ಎಂದು ಆರೋಪಿಸಿದ್ದರು.
'ದಾಳಿಕೋರರು ಪಾಕಿಸ್ತಾನೀಯರಂತೆ ಕಾಣಿಸುತ್ತಿಲ್ಲ. ಅವರ ಫೋಟೋಗಳನ್ನು ನೋಡಿದಾಗ ದಕ್ಷಿಣ ಭಾರತೀಯರಂತೆ ಕಾಣುತ್ತಿದ್ದಾರೆ. ಇಂತಹ ದೊಡ್ಡ ದಾಳಿಯನ್ನು ಕೇವಲ 10 ಮಂದಿ ನಡೆಸಲು ಹೇಗೆ ಸಾಧ್ಯ' ಎಂದು ಅವರು ಪ್ರಶ್ನಿಸಿದ್ದರು.
ದಾಳಿ ಮಾಡಿದ್ದು ಪಾಕಿಸ್ತಾನೀಯರು...
ಅಮೆರಿಕಾ ಸೆನೆಟರುಗಳಾದ ಜಾನ್ ಮೆಕ್ಕೈನ್ ಮತ್ತು ಲಿಂಡ್ಸೆ ಗ್ರಹಾಂ ಜತೆ ಡಿಸೆಂಬರ್ 6ರಂದು ಮಾತನಾಡಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಿಎಂಎಲ್ಎನ್ ಮುಖಂಡ ನವಾಜ್ ಶರೀಫ್, ಮುಂಬೈ ದಾಳಿ ಮಾಡಿದ್ದು ಪಾಕಿಸ್ತಾನೀಯರೇ ಹೌದು ಎಂದಿದ್ದರು.
ಮುಂಬೈ ದಾಳಿ ಮಾಡಿದ್ದು ಪಾಕಿಸ್ತಾನೀಯರು ಎಂಬುದರಲ್ಲಿ ಸಂಶಯವಿಲ್ಲ. ಇದರ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ್ದರು ಎಂದು ಅಮೆರಿಕಾ ರಾಯಭಾರಿಗಳು ವರದಿ ಮಾಡಿದ್ದರು.