ಭೀಕರ ಭೂಕಂಪ, ಸುನಾಮಿಗಳಿಂದ ಭಾರತ ಎಷ್ಟು ಸುರಕ್ಷಿತ?
ಚೆನ್ನೈ , ಗುರುವಾರ, 17 ಮಾರ್ಚ್ 2011 (09:50 IST)
ಇತ್ತೀಚಿನ ಭೂಕಂಪ ಮತ್ತು ಸುನಾಮಿಯಿಂದಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಪಾನ್ ಎರಡನೇ ಪರಮಾಣು ದುರಂತಕ್ಕೆ ಸಾಕ್ಷಿಯಾಗುವ ಭೀತಿಯನ್ನು ಎದುರಿಸುತ್ತಿರುವ ನಡುವೆಯೇ, ಭಾರತದ ಪರಮಾಣು ಸ್ಥಾವರಗಳು ಎಷ್ಟು ಸುರಕ್ಷಿತ ಮತ್ತು ಭೂಕಂಪ ಸಂಭವಿಸಿದರೆ ಅದನ್ನು ಮೀರಿ ನಿಲ್ಲಲು ನಾವು ಮಾಡಿರುವ ಸಿದ್ಧತೆಯು ಪರಿಣಾಮಕಾರಿಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ತಜ್ಞರ ಪ್ರಕಾರ ಭಾರತವು ಇಂತಹ ಅಪಾಯಗಳಿಂದ ಮುಕ್ತವಾಗಿಲ್ಲ.ಜಪಾನ್‌ನಲ್ಲಿ 9ರ ತೀವ್ರತೆಯ ಭೂಕಂಪದಿಂದಾಗಿ ಭಾರೀ ಅನಾಹುತ ಸಂಭವಿಸಿರುವ ಹೊರತಾಗಿಯೂ ಭಾರತದಲ್ಲಿನ ಪರಮಾಣು ಸ್ಥಾವರಗಳು ಸುರಕ್ಷಿತವಾಗಿವೆ. ಇದಕ್ಕೆ ಕಾರಣ ಭೂಕಂಪ ಅಥವಾ ಸುನಾಮಿಗಳು ಹುಟ್ಟಿಕೊಳ್ಳುವ ಪ್ರದೇಶಗಳಿಂದ ಸ್ಥಾವರಗಳು ದೂರದಲ್ಲಿರುವುದು ಮತ್ತು ಸುರಕ್ಷಿತ ಸ್ಥಳಗಳಲ್ಲಿರುವುದು ಎಂದು ಸ್ವತಃ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಭರವಸೆ ನೀಡಿದ್ದರು.ಆದರೆ ಬೆಂಗಳೂರಿನಲ್ಲಿರುವ ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ ಖ್ಯಾತ ಭೂಗರ್ಭ ಶಾಸ್ತ್ರಜ್ಞ ಕೆ.ಎಸ್. ವಲ್ದಿಯಾ ಸೇರಿದಂತೆ ದೇಶದ ಹಲವು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.2004
ರ ಡಿಸೆಂಬರ್ 26ರಂದು ಹಿಂದೂ ಮಹಾಸಾಗರದಲ್ಲಿ ಸಂಭವಿಸಿದ ಸುನಾಮಿಯಿಂದಾಗಿ ಕಲ್ಪಾಕಂನಲ್ಲಿನ ಮದ್ರಾಸ್ ಅಣು ವಿದ್ಯುತ್ ಕೇಂದ್ರಕ್ಕೆ ನೆರೆಯನ್ನು ಹೊರತುಪಡಿಸಿದ ಯಾವುದೇ ಹಾನಿಯಾಗಿಲ್ಲ. ಇದಕ್ಕೆ ಕಾರಣ ಸುನಾಮಿ ಹುಟ್ಟಿಕೊಂಡದ್ದು ಭಾರತದಿಂದ 1,400 ಕಿಲೋ ಮೀಟರ್ ದೂರದಲ್ಲಿರುವ ಸುಮಾತ್ರ ಸಮೀಪದ ಸಬ್‌ಡಕ್ಷನ್ ವಲಯದಿಂದ (ಒಂದರ ಮೇಲೊಂದರಂತೆ ಬರುವ ಎರಡು ಸಾಗರ ಪದರಗಳು) ಮತ್ತು ಇದು ಅಂಡಮಾನ್ ದ್ವೀಪದತ್ತ ಉತ್ತರಕ್ಕೆ ಮುಂದುವರಿದಿರುವುದರಿಂದ ಎಂದು ವಲ್ದಿಯಾ ಪ್ರತಿಪಾದಿಸಿದ್ದಾರೆ.
ಅವರ ಪ್ರಕಾರ, ಸುನಾಮಿ (2004ರದ್ದು) ಸುಮಾತ್ರದ ಬದಲು, ಅಂಡಮಾನ್ ದ್ವೀಪದ ಸಮೀಪದಿಂದ ಹುಟ್ಟಿಕೊಳ್ಳುತ್ತಿದ್ದರೆ ಪರಿಣಾಮ ಭೀಕರವಾಗಿರುತ್ತಿತ್ತು. ಸುನಾಮಿಯ ರಕ್ಕಸ ಅಲೆಗಳು ಭಾರತದ ಪೂರ್ವ ಕರಾವಳಿ (ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ) ಮೇಲೆ ಇನ್ನೂ ಹೆಚ್ಚಿನ ಹಾನಿಯನ್ನು ಮಾಡುತ್ತಿತ್ತು.ಸುನಾಮಿಯನ್ನು ಸೃಷ್ಟಿಸಬಹುದಾದ ಸಾಕಷ್ಟು ಭೂಕಂಪಗಳು ಅಂಡಮಾನ್ ದ್ವೀಪಗಳಲ್ಲಿ ನಡೆದಿವೆ. ಇನ್ನು ಮುಂದಿನ ದಿನಗಳಲ್ಲಿ ಭಾರತದ ಪೂರ್ವ ಕರಾವಳಿಯ ಹತ್ತಿರದಲ್ಲಿರುವ ಪ್ರದೇಶದಲ್ಲಿ ಇಂತಹ ಭೂಕಂಪಗಳು ನಡೆಯುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದಿರುವ ವಲ್ದಿಯಾ, ಭಾರತದ ಪಶ್ಚಿಮ ಕರಾವಳಿಯು (ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್) ಸುನಾಮಿಗಳಿಂದ ಸುರಕ್ಷಿತವೆಂದು ಭಾವಿಸಬೇಕಾಗಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.ಅರಬ್ಬಿ ಸಮುದ್ರದ ಇನ್ನೊಂದು ಸಬ್‌ಡಕ್ಷನ್ ವಲಯವಾಗಿರುವ ಮಕ್ರನ್ ಕರಾವಳಿಯಲ್ಲಿ (ಪರ್ಷಿಯಾ ಸಮೀಪ) 1945ರಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಈಗ ಮುಂಬೈ ಎಂದು ಕರೆಯಲ್ಪಡುವ, ಆಗಿನ ಬಾಂಬೆ ಮೇಲೆ ಸುನಾಮಿ ಅಲೆಗಳು ಅಪ್ಪಳಿಸಿರುವುದನ್ನು ಕೂಡ ಅವರು ನೆನಪಿಸಿದ್ದಾರೆ.ಭಾರತದ ಪರ್ಯಾಯ ದ್ವೀಪಗಳಲ್ಲಿ ಯಾವುದೇ ಭೂಗರ್ಭ ಸಮಸ್ಯೆ ಇಲ್ಲವೆಂಬ ಬಹುತೇಕ ತಜ್ಞರ ಅಭಿಪ್ರಾಯಗಳನ್ನು ವಲ್ದಿಯಾ ಒಪ್ಪಿಕೊಂಡಿಲ್ಲ. ಪಶ್ಚಿಮ ಕರಾವಳಿಯಲ್ಲಿ ಬರುವ ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಭೂಗರ್ಭ ಸಮಸ್ಯೆಗಳಿವೆ, ಭಾರೀ ಹಾನಿಯನ್ನುಂಟು ಮಾಡುವ ಭೂಕಂಪಗಳು ಸಂಭವಿಸುವ ದೋಷಗಳು ಇವೆ ಎನ್ನುವುದನ್ನು ತಾನು ಅಧ್ಯಯನದ ಮೂಲಕ ಕಂಡುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.ಪ್ರಸಕ್ತ ಭಾರತದಲ್ಲಿ ಕರ್ನಾಟಕದ ಕೈಗಾ ಸೇರಿದಂತೆ 20 ಅಣು ವಿದ್ಯುತ್ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಿಂದ 4,780 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇವುಗಳಲ್ಲಿ ಬಹುತೇಕ ಎಲ್ಲವೂ, ಭೂಕಂಪ ಅಥವಾ ಇನ್ನಿತರ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ತನ್ನಿಂದ ತಾನೇ ಸ್ಥಗಿತಗೊಳ್ಳುವ ತಂತ್ರಜ್ಞಾನವನ್ನು ಹೊಂದಿದೆ ಎಂದು ಅಣು ವಿದ್ಯುತ್ ಕೇಂದ್ರದ ಅಧಿಕಾರಿಗಳು ಇತ್ತೀಚೆಗಷ್ಟೇ ಸ್ಪಷ್ಟಪಡಿಸಿದ್ದರು.ಹೈದರಾಬಾದಿನಲ್ಲಿರುವ ನ್ಯಾಷನಲ್ ಜಿಯೋಫಿಸಿಕಲ್ ರೀಸರ್ಚ್ ಇನ್ಸ್‌ಟಿಟ್ಯೂಟ್‌ನ ಹಿರಿಯ ವಿಜ್ಞಾನಿ ವಿನೀತ್ ಗಹಲೌತ್ ಅವರ ಪ್ರಕಾರ ಜಪಾನ್‌ನಲ್ಲಿ ನಡೆದಿರುವಂತಹ ಭೂಕಂಪಕ್ಕೆ ಭಾರತ ಸಿದ್ಧವಾಗಿಲ್ಲ.ಅದಕ್ಕೆ ಅವರು ಕೊಡುವ ಸಾಮಾನ್ಯ ಉತ್ತರ, ನಮ್ಮಲ್ಲಿ ಕಟ್ಟಡಗಳನ್ನು ಕಟ್ಟುವಾಗ ನಿರ್ದಿಷ್ಟ ನಿಯಮಗಳನ್ನು ಅನುಸರಿಸುತ್ತಿಲ್ಲ ಎನ್ನುವುದು. ಈ ಬಾರಿಯ ಭೂಕಂಪ ಭಾರೀ ಆಘಾತಕ್ಕೆ ಕಾರಣವಾಗಿದೆಯಾದರೂ, ಜಪಾನ್ ವಿಶ್ವದಲ್ಲೇ ಅಂತಹ ಪ್ರಕೃತಿ ವಿಕೋಪಗಳನ್ನು ಎದುರಿಸಲು ಸಿದ್ಧವಾಗಿದ್ದ ರಾಷ್ಟ್ರ. ನಾವು ಭೂಕಂಪದ ಕುರಿತು ಇನ್ನಷ್ಟು ಅಧ್ಯಯನ ನಡೆಸಬೇಕಿದೆ ಮತ್ತು ಎದುರಿಸುವ ನಿಟ್ಟಿನಲ್ಲಿ ನಮ್ಮದೇ ತಯಾರಿಯಲ್ಲಿ ಇರಬೇಕಿದೆ ಎಂದು ವಿನೀತ್ ಅಭಿಪ್ರಾಯಪಟ್ಟಿದ್ದಾರೆ.ಅತ್ತ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ 'ಜೈತಪುರ್ ಅಣು ವಿದ್ಯುತ್ ಕೇಂದ್ರ' ಸ್ಥಾಪಿಸುವುದು ಸುರಕ್ಷಿತವೇ ಎಂಬ ಪ್ರಶ್ನೆ ಬಂದರೆ, ಇದುವರೆಗಿನ ಭೂಕಂಪಗಳು ಭೀತಿ ಹುಟ್ಟಿಸುತ್ತವೆ. ಆ ಪ್ರದೇಶದಲ್ಲಿ 1985ರಿಂದ 2005ರ ನಡುವೆ ಬರೋಬ್ಬರಿ 92 ಭೂಕಂಪಗಳು ಸಂಭವಿಸಿವೆ. ಅವುಗಳಲ್ಲಿ 1993ರಲ್ಲಿ ಅನುಭವಕ್ಕೆ ಬಂದ ಭೂಕಂಪ ರಿಕ್ಟರ್ ಮಾಪಕದಲ್ಲಿ 6.2ರ ತೀವ್ರತೆಯನ್ನು ಹೊಂದಿತ್ತು. ಇಲ್ಲಿ ದಾಖಲಾದ ಗರಿಷ್ಠ ತೀವ್ರತೆಯ ಭೂಕಂಪವಿದು.ಹೇಳಿ, ನಮ್ಮ ದೇಶ ಭೂಕಂಪ-ಸುನಾಮಿಗಳಿಂದ ಸುರಕ್ಷಿತ ಎಂಬ ಭಾವನೆಯಿದೆಯೇ?