Select Your Language

Notifications

webdunia
webdunia
webdunia
webdunia

ಭಾರತದ ವಿತ್ತ ಸಚಿವ ಪ್ರಣಬ್ ಯಾಕೆ?: ಪ್ರಶ್ನಿಸಿದ್ದ ಅಮೆರಿಕಾ

ಹಿಲರಿ ಕ್ಲಿಂಟನ್
ನವದೆಹಲಿ , ಶುಕ್ರವಾರ, 18 ಮಾರ್ಚ್ 2011 (13:53 IST)
ಸರಕಾರಗಳು ಎಷ್ಟೇ ಸ್ಪಷ್ಟನೆಗಳನ್ನು ನೀಡುತ್ತಾ ಹೋದರೂ ವಿದೇಶಗಳು, ಅದರಲ್ಲೂ ಅಮೆರಿಕಾವು ಭಾರತದ ಮೇಲೆ ಭಾರೀ ನಿಯಂತ್ರಣ ಹೊಂದಿರುವುದು ನಿಚ್ಚಳವೆನ್ನುವುದು ಮತ್ತೊಮ್ಮೆ ಬಯಲಾಗಿದೆ. ಯುಪಿಎ ಸರಕಾರದಲ್ಲಿ ಪ್ರಣಬ್ ಮುಖರ್ಜಿಯವರನ್ನೇ ಹಣಕಾಸು ಸಚಿವರನ್ನಾಗಿ ನೇಮಕ ಮಾಡಿರುವುದು ಯಾಕೆ ಎಂದು ಅಮೆರಿಕಾ ಪ್ರಶ್ನೆ ಮಾಡಿತ್ತೆನ್ನುವುದೇ ಈಗ ಇದಕ್ಕೆ ಸಿಕ್ಕಿರುವ ಪೂರಕ ಮಾಹಿತಿ.

ಈ ಪ್ರಶ್ನೆ ಮಾಡಿರುವುದು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್. ನವದೆಹಲಿಯಲ್ಲಿನ ಅಮೆರಿಕಾ ರಾಯಭಾರ ಕಚೇರಿಗೆ ರವಾನಿಸಿದ್ದ ಈ ಪತ್ರವನ್ನು ವಿಕಿಲೀಕ್ಸ್ ಸಂಪಾದಿಸಿತ್ತು. ಅದನ್ನು ಪಡೆದುಕೊಂಡಿರುವ 'ದಿ ಹಿಂದೂ' ಆಂಗ್ಲಪತ್ರಿಕೆ ಬಹಿರಂಗಪಡಿಸಿದೆ.

ಯುಪಿಎ ಎರಡನೇ ಅವಧಿಯ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಪ್ರಣಬ್ ಮುಖರ್ಜಿಯವರು ವಿತ್ತ ಸಚಿವರಾಗಿ ನೇಮಕಗೊಂಡಿದ್ದರು. ಇದನ್ನೇ ಹಿಲರಿ ಕ್ಲಿಂಟನ್ ಪ್ರಶ್ನೆ ಮಾಡಿದ್ದರು.

'ಪ್ರಣಬ್ ಮುಖರ್ಜಿಯವರನ್ನು ಹಣಕಾಸು ಸಚಿವರನ್ನಾಗಿ ಆಯ್ಕೆ ಮಾಡಿರುವುದು ಯಾಕೆ? ಅವರು ಯಾವ ಉದ್ಯಮದ ಗುಂಪಿಗೆ ಆಪ್ತರಾಗಿದ್ದಾರೆ? ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರಿಗಿಂತ ಮುಖರ್ಜಿಯವರಿಗೆ ಯಾವ ಕಾರಣಕ್ಕೆ ಮಣೆ ಹಾಕಲಾಯಿತು?'

'ಮುಖರ್ಜಿಯವರನ್ನು ಯಾವ ಉದ್ಯಮಿಗಳ ಗುಂಪು ನೆಚ್ಚಿಕೊಂಡಿದೆ? ತನ್ನ ಆರ್ಥಿಕ ನೀತಿಗಳ ಮೂಲಕ ಯಾರಿಗೆ ಸಹಾಯ ಮಾಡಲು ಅವರು ಬಯಸುತ್ತಿದ್ದಾರೆ? ಮುಂದಿನ ಬಜೆಟಿನಲ್ಲಿ ಮುಖರ್ಜಿಯವರ ಆದ್ಯತೆಗಳೇನು?'

'ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಆರ್ಥಿಕ ಸುಧಾರಣಾ ಕಾರ್ಯಸೂಚಿಯ ಕುರಿತು ಮುಖರ್ಜಿಯವರ ನಿಲುವುಗಳೇನು? ಈ ಸುಧಾರಣಾ ನೀತಿಗಳನ್ನು ಜಾರಿಗೆ ತರಲು ಅವರು ಎಷ್ಟು ತ್ವರಿತವಾಗಿ ಯೋಜನೆ ರೂಪಿಸುತ್ತಾರೆ? ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಅವರ ಸಾಮರ್ಥ್ಯಗಳೇನು? ಅವರ ಪ್ರಮುಖ ಆರ್ಥಿಕ ನೀತಿಗಳೇನು?'

'ಅಮೆರಿಕಾದ ದ್ವಿಪಕ್ಷೀಯ ಆರ್ಥಿಕ ಸಂಬಂಧಗಳ ಬಗ್ಗೆ ಮುಖರ್ಜಿಯವರ ಧೋರಣೆಗಳೇನು? ಈ ಸಂಬಂಧ ಎಲ್ಲಿಗೆ ಮುಟ್ಟಬಹುದು ಎಂಬ ದೂರದೃಷ್ಟಿ ಹೊಂದಿದ್ದಾರೆ? ಯಾವ ರೀತಿಯ ಸಹಕಾರವನ್ನು ಅವರು ಬಯಸುತ್ತಿದ್ದಾರೆ? ಅಮೆರಿಕಾ-ಭಾರತ ಮತ್ತು ಅಮೆರಿಕಾ-ಚೀನಾದ ನಡುವಿನ ಆರ್ಥಿಕ ಸಂಬಂಧಗಳ ಹೋಲಿಕೆಯನ್ನು ಅವರು ಹೇಗೆ ಮಾಡುತ್ತಾರೆ?'

'ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಡಿ.ವಿ. ಸುಬ್ಬರಾವ್ ಜತೆಗೆ ಮುಖರ್ಜಿಯವರ ಸಂಬಂಧ ಹೇಗಿದೆ? ಪಿ. ಚಿದಂಬರಂ ಅವರನ್ನು ವಿತ್ತ ಸಚಿವ ಸ್ಥಾನದಿಂದ ಬದಲಾವಣೆ ಮಾಡುವುದರ ಕುರಿತು ಸುಬ್ಬರಾವ್ ಅಭಿಪ್ರಾಯವೇನು? ಚಿದಂಬರಂ ಬದಲಾವಣೆಯ ನಂತರ ವಿತ್ತ ಸಚಿವಾಲಯ ಮತ್ತು ರಿಸರ್ವ್ ಬ್ಯಾಂಕ್ ನಡುವಿನ ಸಂಬಂಧ ಹೇಗಿದೆ?'

--- ಹೀಗೆ ಭಾರತದ ಆರ್ಥಿಕ ನೀತಿಗಳು, ಸಚಿವರುಗಳ ಬದಲಾವಣೆ, ಸಚಿವರುಗಳ ನೇಮಕ, ಇತರ ಆಂತರಿಕ ವಿಚಾರಗಳ ಕುರಿತು ಅಮೆರಿಕಾವು ಹಲವು ಪ್ರಶ್ನೆಗಳನ್ನು ಮಾಡಿದೆ. ಹಿಲರಿ ಕ್ಲಿಂಟನ್ ಅವರು ಮುಖರ್ಜಿಯವರ ಬಗ್ಗೆ ಒಂದು ರೀತಿಯ ಅಸಮಾಧಾನ ಹೊಂದಿರುವುದು ಮತ್ತು ಚಿದಂಬರಂ ಅಥವಾ ಮಾಂಟೆಕ್ ಅವರ ಪರವಾಗಿರುವುದುಪ್ರಶ್ನೆಗಳಲ್ಲಿ ವ್ಯಕ್ತವಾಗಿದೆ.

Share this Story:

Follow Webdunia kannada