Select Your Language

Notifications

webdunia
webdunia
webdunia
webdunia

ಪ್ರಧಾನಿ ಸಿಂಗ್ ರಾಜೀನಾಮೆ ಕೊಡಲೇಬೇಕು: ಸುಷ್ಮಾ ಸ್ವರಾಜ್

ಸುಷ್ಮಾ ಸ್ವರಾಜ್
ಸಿಲ್ಚಾರ್ , ಬುಧವಾರ, 30 ಮಾರ್ಚ್ 2011 (15:24 IST)
ತನ್ನ ಸಚಿವಾಲಯದಲ್ಲೇ ಭ್ರಷ್ಟಾಚಾರ ನಡೆಯದಂತೆ ನೋಡಿಕೊಳ್ಳುವಲ್ಲಿ ವಿಫಲರಾಗಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ರಾಜೀನಾಮೆ ನೀಡಬೇಕು ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಆಗ್ರಹಿಸಿದ್ದಾರೆ.

ಅಸ್ಸಾಂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಚಾರ್ ಜಿಲ್ಲೆಯ ಸಿಲ್ಚಾರ್‌ನಲ್ಲಿ ಮಾತನಾಡುತ್ತಿದ್ದ ಸುಷ್ಮಾ, ಸರಕಾರದಲ್ಲಿನ ಹಲವು ಹಗರಣಗಳಲ್ಲಿ ಪಾಲ್ಗೊಂಡಿರುವ ಭ್ರಷ್ಟ ಸಚಿವರುಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿರುವ ಪ್ರಧಾನಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದರು.

ಅತ್ಯುತ್ತಮ ಆಡಳಿತದ ಭರವಸೆಯಲ್ಲಿ ಬಿಜೆಪಿಯು ಮತದಾರರ ತೀರ್ಪನ್ನು ಬಯಸುತ್ತಿದೆ ಎಂದೂ ಮನವಿ ಮಾಡಿಕೊಂಡರು.

ಯುಪಿಎ ಆಡಳಿತಾವಧಿಯಲ್ಲಿ ಸಾಮಾನ್ಯ ಜನತೆ ಈ ಹಿಂದೆ ಎಂದೂ ಕಾಣದ ರೀತಿಯ ಬೆಲೆ ಏರಿಕೆಯಿಂದ ಹೈರಾಣಾಗಿ ಹೋಗಿದ್ದಾರೆ. ಸಾಮಾನ್ಯ ಜನತೆ ಭಾರೀ ಸಂಕಷ್ಟಗಳಿಗೆ ಒಳಗಾಗಿರುವುವುದರಿಂದ ಕಾಂಗ್ರೆಸ್ ಈ ಬಾರಿ ಮತದಾರರ ಒಲವು ಗಿಟ್ಟಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸುಷ್ಮಾ ಭರವಸೆ ವ್ಯಕ್ತಪಡಿಸಿದರು.

ಧಾರ್ಮಿಕ ಕಿರುಕುಳದ ಹಿನ್ನೆಲೆಯಲ್ಲಿ 1971ರ ಅವಧಿಯಲ್ಲಿ ಬಾಂಗ್ಲಾದೇಶ ತೊರೆದು ಭಾರತಕ್ಕೆ ವಲಸೆ ಬಂದಿರುವ ಹಿಂದೂಗಳಿಗೆ ಈ ದೇಶದಲ್ಲಿ ಯಾವುದೇ ಹಕ್ಕಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿರುವುದಕ್ಕೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕಿ ಆಗ್ರಹಿಸಿದರು.

ದಿಗ್ವಿಜಯ್ ಹೇಳಿಕೆ ದುರದೃಷ್ಟಕರ. ಧಾರ್ಮಿಕ ಹಿಂಸೆಯ ನಂತರ ಬಾಂಗ್ಲಾದೇಶ ಬಿಟ್ಟು ಭಾರತ ಸೇರಿರುವ ಹಿಂದೂ ವಲಸೆಗಾರರಿಗೆ ನಿರಾಶ್ರಿತ ದರ್ಜೆಯನ್ನು ನೀಡಲು ಬಿಜೆಪಿ ಬೆಂಬಲವಿದೆ ಎಂದರು.

ಕಳೆದ ತಿಂಗಳು ಕರೀಂಗಂಜ್‌ನಲ್ಲಿ ಮಾತನಾಡುತ್ತಿದ್ದ ದಿಗ್ವಿಜಯ್ ಸಿಂಗ್, ಬಾಂಗ್ಲಾದೇಶದಿಂದ ವಲಸೆ ಬಂದಿರುವ ಹಿಂದೂ ಬೆಂಗಾಲಿಗಳು ನಿರಾಶ್ರಿತರಲ್ಲ, ಅವರು ಅಕ್ರಮ ವಲಸಿಗರು. ಅವರಿಗೆ ಈ ದೇಶದಲ್ಲಿ ಯಾವುದೇ ಹಕ್ಕಿಲ್ಲ ಎಂದು ಹೇಳಿದ್ದರು.

Share this Story:

Follow Webdunia kannada