Select Your Language

Notifications

webdunia
webdunia
webdunia
webdunia

ಕಾಸಿಗಾಗಿ ಓಟು ಬಹಿರಂಗ; ಪತ್ರಿಕೆ ಮೇಲೆ ಕಾಂಗ್ರೆಸ್ ಕೇಸು?

ವಿಕಿಲೀಕ್ಸ್
ನವದೆಹಲಿ , ಶುಕ್ರವಾರ, 18 ಮಾರ್ಚ್ 2011 (12:27 IST)
ಯುಪಿಎ ಮೊದಲ ಅವಧಿಯಲ್ಲಿ ನಡೆದಿದೆ ಎಂದು ಹೇಳಲಾಗಿರುವ 'ಕಾಸಿಗಾಗಿ ಓಟು' ವಿಚಾರದ ಬಗ್ಗೆ ಇನ್ನಷ್ಟು ವಿವರಗಳನ್ನು ವಿಕಿಲೀಕ್ಸ್‌ನಿಂದ ಪಡೆದುಕೊಂಡು ಬಹಿರಂಗಪಡಿಸಿದ ಪತ್ರಿಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬೆದರಿಕೆಯನ್ನು ಕಾಂಗ್ರೆಸ್ ಹಾಕಿದೆ.

ಅಮೆರಿಕಾದ ಬಣ್ಣ ಬಯಲು ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ 'ವಿಕಿಲೀಕ್ಸ್' ಸಂಗ್ರಹಿಸಿರುವ ರಹಸ್ಯ ದಾಖಲೆಗಳನ್ನು ಪಡೆದುಕೊಂಡು, ಅದನ್ನು ಬಿಡುಗಡೆ ಮಾಡಿರುವ 'ದಿ ಹಿಂದೂ' ಆಂಗ್ಲ ಪತ್ರಿಕೆಯ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸುವ ಅಥವಾ ಮಾನನಷ್ಟ ಮೊಕದ್ದಮೆ ದಾಖಲಿಸುವ ಬಗ್ಗೆ ಪಕ್ಷವು ಪರಿಶೀಲನೆ ನಡೆಸುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.

'ದಿ ಹಿಂದೂ' ಪತ್ರಿಕೆ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ, ಪತ್ರಿಕೆಯ ವಿರುದ್ಧ ಕ್ರಮ ಕೈಗೊಳ್ಳಲು ತನಗಿರುವ ಕಾನೂನು ಅವಕಾಶದ ಅರಿವು ತನಗಿದೆ. ಹಕ್ಕುಚ್ಯುತಿ ನಿರ್ಣಯ ಮಂಡನೆ ಅಥವಾ ಮಾನನಷ್ಟ ಮೊಕದ್ದಮೆ ದಾಖಲಿಸುವ ಅವಕಾಶ ನಮಗಿದೆ. ಇದು ಬೇಜವಾಬ್ದಾರಿಯುತ ರಾಜಕಾರಣ ಮತ್ತು ಬೇಜವಾಬ್ದಾರಿಯುತ ಪತ್ರಿಕೋದ್ಯಮ ಎಂದರು.

ಕಾಂಗ್ರೆಸ್ ಪಕ್ಷವು 'ದಿ ಹಿಂದೂ' ಪತ್ರಿಕೆಯ ವಿರುದ್ಧ ಇದುವರೆಗೂ ಮಾನನಷ್ಟ ಮೊಕದ್ದಮೆ ದಾಖಲಿಸಿಲ್ಲ ಎಂದರೆ, ಅದರ ಅರ್ಥ ಕಾಂಗ್ರೆಸ್ ಯಾರಿಗಾದರೂ ಕ್ಲೀನ್ ಚಿಟ್ ನೀಡಿದೆ ಎಂದಲ್ಲ ಎಂದು ಮಾತಿನುದ್ದಕ್ಕೂ ರಹಸ್ಯ ಬಹಿರಂಗಪಡಿಸಿದ ಪತ್ರಿಕೆ ಮೇಲೆ ಹರಿಹಾಯ್ದರು.

ವಿಕಿಲೀಕ್ಸ್ ವರದಿಗಳಿಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ, ಅವುಗಳು ಪರಿಶೀಲನೆಗೊಳಗಾಗಿಲ್ಲ ಎಂದು ಆರೋಪಿಸಿದ ಸಿಂಘ್ವಿ, ವಿದೇಶಿಗರ ಆರೋಪಗಳು ಗೌರವಯುತವಾಗಿಲ್ಲ ಎಂದರು.

ಕಾಂಗ್ರೆಸ್ ವಿರುದ್ಧ ಮಾಡಲಾಗಿರುವ ಆರೋಪಗಳ ಕುರಿತು ಸಮರ್ಥ ಪುರಾವೆಗಳನ್ನು ಒದಗಿಸಲು ಅಮೆರಿಕಾದ ಗೃಹ ಸಚಿವಾಲಯ ಅಥವಾ ವಿರೋಧ ಪಕ್ಷಗಳು ಅಥವಾ ಮಾಧ್ಯಮಗಳು ಸಿದ್ಧವೇ ಎಂದೂ ಪ್ರಶ್ನಿಸಿದರು.

ವಿಕಿಲೀಕ್ಸ್-ಹಿಂದೂ ಏನು ಹೇಳಿತ್ತು?
ಅಮೆರಿಕಾ ಜತೆಗಿನ ಅಣು ಒಪ್ಪಂದವನ್ನು ವಿರೋಧಿಸಿ 2008ರಲ್ಲಿ ಎಡಪಕ್ಷಗಳು ಯುಪಿಎ ಮೊದಲ ಸರಕಾರದಿಂದ ಬೆಂಬಲ ವಾಪಸ್ ಪಡೆದುಕೊಂಡ ನಂತರ ಎದುರಾಗಿದ್ದ ವಿಶ್ವಾಸ ಮತದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಹಲವು ಸಂಸದರಿಗೆ ಲಂಚ ನೀಡಿತ್ತು ಎಂದು ರಹಸ್ಯ ದಾಖಲೆಗಳು ಖಚಿತಪಡಿಸಿದ್ದವು.

ಕಾಂಗ್ರೆಸ್ ನಾಯಕ ಸತೀಶ್ ಶರ್ಮಾ ಅವರ ಸಹಚರ ನಚಿಕೇತ್ ಕಪೂರ್ ಅವರು ಈ ಬಗ್ಗೆ ಅಮೆರಿಕಾ ರಾಯಭಾರಿ ಕಚೇರಿಯ ಅಧಿಕಾರಿಗೆ ಇದನ್ನು ಹೇಳಿದ್ದರು. ಎರಡೆರಡು ಹಣದ ಪೆಟ್ಟಿಗೆಗಳನ್ನು ತೋರಿಸುತ್ತಾ, ಇದರಲ್ಲಿ ಸುಮಾರು 60 ಕೋಟಿ ರೂಪಾಯಿ ಹಣವಿದೆ; ಅಜಿತ್ ಸಿಂಗ್ ಅವರ ಪಕ್ಷದ ನಾಲ್ವರು ಸಂಸದರಿಗೆ 40 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ಹೇಳಿದ್ದರು.

ಇದನ್ನು ಕೇಳಿಸಿಕೊಂಡಿದ್ದ ಅಮೆರಿಕಾ ರಾಯಭಾರ ಕಚೇರಿ ಅಧಿಕಾರಿ, ಈ ಕುರಿತ ಮಾಹಿತಿಯನ್ನು ಅಮೆರಿಕಾಕ್ಕೆ ರವಾನಿಸಿದ್ದರು. ಅದನ್ನು ವಿಕಿಲೀಕ್ಸ್ ಪಡೆದುಕೊಂಡಿತ್ತು.

Share this Story:

Follow Webdunia kannada