Select Your Language

Notifications

webdunia
webdunia
webdunia
webdunia

ಕಾಸಿಗಾಗಿ ಓಟು; ಜನರೇ ಗೆಲ್ಲಿಸಿದ್ದಾರೆ, ನಿಮ್ಮದೇನು?: ಕೇಂದ್ರ

ಯುಪಿಎ
ನವದೆಹಲಿ , ಶುಕ್ರವಾರ, 18 ಮಾರ್ಚ್ 2011 (15:51 IST)
ಪ್ರತಿಪಕ್ಷಗಳ ತೀವ್ರ ಒತ್ತಾಯಕ್ಕೆ ಮಣಿದಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸಂಸತ್ತಿನಲ್ಲಿ ಕೊನೆಗೂ ಬಾಯ್ಬಿಟ್ಟಿದ್ದಾರೆ. ಕಾಸಿಗಾಗಿ ಓಟು ಪ್ರಸಂಗವೇ ಸುಳ್ಳು, ಅಂತಹ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆದಿಲ್ಲ ಎಂದು ಸರಕಾರ ಮತ್ತು ಕಾಂಗ್ರೆಸ್ ಪಕ್ಷವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಅವರು, ಇದಕ್ಕೆ ಜನತಾ ನ್ಯಾಯಾಲಯವೇ ಸಾಕ್ಷಿ ಎಂದಿದ್ದಾರೆ.

2008ರಲ್ಲಿ ಅಣು ಒಪ್ಪಂದದ ಸಂಬಂಧ ಎಡಪಕ್ಷಗಳು ಕೈಕೊಟ್ಟ ನಂತರ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಕಾಂಗ್ರೆಸ್ ಇತರ ಪಕ್ಷಗಳ ಸಂಸದರಿಗೆ ಕೋಟಿಗಟ್ಟಲೆ ಲಂಚ ಕೊಟ್ಟಿತ್ತು ಎನ್ನುವುದು ಹಳೆಯ ಆರೋಪ. ಇದಕ್ಕೆ ಪುಷ್ಠಿ ನೀಡುವ ವರದಿ ಅಮೆರಿಕಾ ರಾಯಭಾರಿಯ ದಾಖಲೆಯಲ್ಲಿ ಬಹಿರಂಗವಾಗಿತ್ತು. ಇದು ಸಂಸತ್ತಿನಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಈ ಕುರಿತು ಪ್ರಧಾನ ಮಂತ್ರಿಯವರೇ ಹೇಳಿಕೆ ನೀಡಬೇಕು ಎಂದು ಸಂಸತ್ತಿನ ಎರಡೂ ಸದನಗಳಲ್ಲಿ ಬಿಜೆಪಿ ಮತ್ತಿತರ ಪ್ರತಿಪಕ್ಷಗಳು ಜಿದ್ದಿಗೆ ಬಿದ್ದಿದ್ದವು. ಕಲಾಪವನ್ನು ಸುಗಮವಾಗಿ ನಡೆಯದಂತೆ ಮಾಡಿದ್ದವು. ಒತ್ತಡಕ್ಕೆ ಮಣಿದ ಪ್ರಧಾನಿ ಸಿಂಗ್ ಅಪರಾಹ್ನ ಲೋಕಸಭೆಯಲ್ಲಿ ಹೇಳಿಕೆ ನೀಡಿದರು.

ಪ್ರಧಾನಿಯವರ ಹೇಳಿಕೆ ಈ ರೀತಿಯಿದೆ--

'2008ರ ಜುಲೈ ತಿಂಗಳ ವಿಶ್ವಾಸ ಮತದ ನಂತರ ಅದನ್ನು ಪ್ರತಿಪಕ್ಷಗಳು ಮರೆತು ಬಿಟ್ಟಿದ್ದವು. ಅದರ ನಂತರ ನಡೆದ ಚುನಾವಣೆಯಲ್ಲಿ ಜನಮತ ಪಡೆದ ಕಾಂಗ್ರೆಸ್ ಪಕ್ಷವು ಯುಪಿಎ ಎರಡನೇ ಅವಧಿಯಲ್ಲಿ ಅಧಿಕಾರಕ್ಕೆ ಬಂತು'

'14ನೇ ಲೋಕಸಭೆಯ ಅವಧಿಯಲ್ಲಿ ಬಂದ ಲಂಚ ಆರೋಪದ ಕುರಿತು ತನಿಖೆಗಾಗಿ ಸಮಿತಿಯೊಂದನ್ನು ರಚಿಸಲಾಗಿತ್ತು. ಅದರ ವರದಿಯಲ್ಲಿ ಯಾವುದೇ ಆರೋಪಗಳು ನಿಜವೆಂದು ಕಂಡು ಬಂದಿಲ್ಲ. ಯುಪಿಎ ಸರಕಾರದ ಮೇಲಿನ ಆರೋಪಗಳ ಕುರಿತು ಭಾರತೀಯರು ಚರ್ಚೆ ಮಾಡಿದ್ದಾರೆ, ಸಮಾಲೋಚನೆ ನಡೆಸಿದ್ದಾರೆ ಮತ್ತು ತಿರಸ್ಕರಿಸಿದ್ದಾರೆ'

'ವರದಿಯಲ್ಲಿ (ವಿಕಿಲೀಕ್ಸ್) ಉಲ್ಲೇಖಿತಗೊಂಡಿರುವ ಮಂದಿ, ಅದರ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. 14ನೇ ಲೋಕಸಭೆಯ ಅವಧಿಯಲ್ಲಿ ಸರಕಾರದ ಅಥವಾ ಕಾಂಗ್ರೆಸ್ ಪಕ್ಷದ ಯಾವುದೇ ವ್ಯಕ್ತಿ ಯಾರಿಗೂ ಲಂಚ ನೀಡಿಲ್ಲ. ಸರಕಾರವು ಜನತೆಯ ಸಂಪೂರ್ಣ ಬೆಂಬಲ ಪಡೆದಿದೆ'

ಸರಕಾರದ ಉತ್ತರದಿಂದ ಸಮಾಧಾನಗೊಳ್ಳದ ಪ್ರತಿಪಕ್ಷಗಳು ಮತ್ತೆ ಭಾರೀ ಗದ್ದಲ ನಡೆಸಿದವು. ಪರಿಣಾಮ ಕಲಾಪವನ್ನು ಸ್ಪೀಕರ್ ಮೀರಾ ಕುಮಾರ್ ಮುಂದೂಡಿದರು.

ಇದಕ್ಕೂ ಮೊದಲು ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ವಿಕಿಲೀಕ್ಸ್ ಮಾಹಿತಿಯ ಕುರಿತು ಪ್ರತಿಪಕ್ಷಗಳು ಪ್ರಧಾನಿ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದ್ದವು. ಪ್ರಧಾನಿ ಹೇಳಿಕೆ ನೀಡದ ಹೊರತು ಕಲಾಪ ಮುಂದುವರಿಯಬಾರದು ಎಂದು ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಪಟ್ಟು ಹಿಡಿದಿದ್ದರು.

ಸುಷ್ಮಾ ಅವರ ಈ ನಿರ್ಧಾರವನ್ನು ಬಿಜೆಪಿ ವರಿಷ್ಠ ಎಲ್.ಕೆ. ಆಡ್ವಾಣಿ ಕೂಡ ಬೆಂಬಲಿಸಿದರು. ಬಳಿಕ ಬಿಜೆಪಿ ಸಂಸದರು ಸ್ಪೀಕರ್ ಬಾವಿಗಿಳಿದು ಕೋಲಾಹಲ ಎಬ್ಬಿಸಿದರು. ಇದರಿಂದಾಗಿ ಹಲವು ಬಾರಿ ಕಲಾಪ ಮುಂದೂಡಲ್ಪಟ್ಟಿತು.

Share this Story:

Follow Webdunia kannada