Select Your Language

Notifications

webdunia
webdunia
webdunia
webdunia

ಕಪ್ಪುಹಣದ ಬಗ್ಗೆ ಯುಪಿಎ ಗಂಭೀರವಾಗಿಲ್ಲ: ಬಿಜೆಪಿ ಅತೃಪ್ತಿ

ಯುಪಿಎ
ನವದೆಹಲಿ , ಬುಧವಾರ, 30 ಮಾರ್ಚ್ 2011 (11:22 IST)
ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಅಕ್ರಮವಾಗಿ ಕಪ್ಪುಹಣವನ್ನು ಶೇಖರಣೆ ಮಾಡಿರುವ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಮಧ್ಯ ಪ್ರವೇಶ ಮಾಡಿರುವ ಹೊರತಾಗಿಯೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ನಿರ್ಲಕ್ಷ್ಯವಹಿಸುತ್ತಿದೆ, ಗಂಭೀರವಾಗಿಲ್ಲ ಎಂದು ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಪ್ರಕರಣದ ಬಗ್ಗೆ ಯುಪಿಎ ಸರಕಾರದಲ್ಲಿ ಸ್ಪಷ್ಟ ನಿಲುವು ಇಲ್ಲ. ವಿದೇಶಗಳಲ್ಲಿ ಕಪ್ಪುಹಣ ಹೊಂದಿರುವ ಭಾರತೀಯ ಪಟ್ಟಿಯನ್ನು ಸುಪ್ರೀಂ ಕೋರ್ಟಿಗೆ ನೀಡುವಾಗಲೂ ಆಯ್ದವರನ್ನು ಮಾತ್ರ ಸೇರಿಸಿ ಕಳುಹಿಸಿಕೊಟ್ಟಿದೆ. ಈ ವಿಚಾರದಲ್ಲಿ ಸರಕಾರವು ದೃಢಸಂಕಲ್ಪ ಹೊಂದಿಲ್ಲ. ಇಲ್ಲಿ ಬದ್ಧತೆಯೇ ಕಾಣುತ್ತಿಲ್ಲ ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ಆರೋಪಿಸಿದರು.

ಕಪ್ಪುಹಣದ ಮೂಲ ಯಾವುದು ಮತ್ತು ಕಪ್ಪುಹಣದ ಕುರಿತು ಯಾವ ರೀತಿಯ ತನಿಖೆಯನ್ನು ನಡೆಸಲಾಗುತ್ತಿದೆ ಎಂಬ ಬಗ್ಗೆಯೂ ಸರಕಾರ ಸ್ಪಷ್ಟವಾಗಿ ಏನೂ ಹೇಳುತ್ತಿಲ್ಲ. ಭಾರೀ ತೆರಿಗೆ ವಂಚನೆ ಆರೋಪ ಹೊತ್ತಿರುವ ಹಸನ್ ಆಲಿ ವಿರುದ್ಧ ಯಾಕೆ ಇಷ್ಟು ವಿಳಂಬವಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ಕಪ್ಪುಹಣ ಹೊಂದಿರುವವರು ಮತ್ತು ತನಿಖೆಗೆ ಒಳಗಾಗುತ್ತಿರುವ ಮಂದಿ ರಾಜಕೀಯ ಆಶ್ರಯ ಹೊಂದಿರುವುದು ಇದಕ್ಕೆ ಕಾರಣವೇ ಎಂದು ಪರೋಕ್ಷವಾಗಿ ಕಾಂಗ್ರೆಸ್ಸನ್ನು ಸೀತಾರಾಮನ್ ಕುಟುಕಿದರು.

ಹಸನ್ ಆಲಿ ಜತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಸಚಿವರು ಮತ್ತು ಇತರ ಕಾಂಗ್ರೆಸ್ ನಾಯಕರು ಸಂಬಂಧ ಹೊಂದಿದ್ದಾರೆ ಎಂದು ಇತ್ತೀಚೆಗಷ್ಟೇ ವರದಿಯಾಗಿದ್ದನ್ನು ಸ್ಮರಿಸಬಹುದು.

ವಿದೇಶಗಳಲ್ಲಿನ ಬ್ಯಾಂಕುಗಳಲ್ಲಿನ ಕಪ್ಪುಹಣಕ್ಕೆ ಸಂಬಂಧಪಟ್ಟ ಪ್ರಕರಣಗಳ ಸಂಪೂರ್ಣ ತನಿಖೆಗಾಗಿ ಗುಪ್ತಚರ ಇಲಾಖೆ, ರಾ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳನ್ನೊಳಗೊಂಡ ವಿಶೇಷ ತನಿಖಾ ದಳವನ್ನು (ಸಿಟ್) ಅಸ್ತಿತ್ವಕ್ಕೆ ತರುವುದು ಒಳಿತು ಎಂಬ ಸುಪ್ರೀಂ ಸಲಹೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿರುವುದು ಕೂಡ ಬಿಜೆಪಿ ಅಸಮಾಧಾನಕ್ಕೆ ಕಾರಣವಾಗಿದೆ.

ವಿದೇಶದಲ್ಲಿನ ಕಪ್ಪುಹಣವನ್ನು ಭಾರತಕ್ಕೆ ಮರಳಿ ತರುವುದು ಸಾಧ್ಯವಾದರೆ, ಸಾಕಷ್ಟು ಅಗತ್ಯಗಳನ್ನು ಅದರಿಂದ ನಾವು ನೀಗಿಸಿಕೊಳ್ಳಬಹುದಾಗಿದೆ. ಆದರೆ ಈ ಬಗ್ಗೆ ಕೇಂದ್ರ ಸರಕಾರವು ಆಸಕ್ತಿ ಹೊಂದಿಲ್ಲ. ಕಪ್ಪುಹಣವನ್ನು ಮರಳಿ ತರುವಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ನಾಯಕಿ ಆರೋಪಿಸಿದರು.

Share this Story:

Follow Webdunia kannada