Select Your Language

Notifications

webdunia
webdunia
webdunia
webdunia

ರಾಜವೈಭವ ಸ್ಫುರಿಸುವ ಮೈಸೂರ ಅರಮನೆ

ರಾಜವೈಭವ ಸ್ಫುರಿಸುವ ಮೈಸೂರ ಅರಮನೆ
WD
ಶಾನಿ
ಅಖಂಡ ಭರತ ಖಂಡದ ಪ್ರಮುಖ ಆಕರ್ಷಣೆಗಳಲ್ಲಿ ಮೈಸೂರು ಒಂದು. ಈ ಮೈಸೂರಿಗೆ ಅರಮನೆಯೇ ಕಿರೀಟ. ಅರಮನೆಗಳ ನಗರವೆಂಬ ಖ್ಯಾತಿವೆತ್ತ ಮೈಸೂರಿನಲ್ಲಿರುವ ಸುಂದರ ಅರಮನೆಯದ್ದು ಸೂಜಿಗಲ್ಲಿನ ಸೆಳೆತ.

ಈ ಅರಮನೆಗಳ ನಾಡಿನಲ್ಲಿ ಮೈದಳೆದು ನಿಂತಿರುವ "ಅಂಬಾ ವಿಲಾಸ" ಮೈಸೂರು ಸಂಸ್ಥಾನವನ್ನು ಶತಮಾನಗಳ ಕಾಲ ಆಳಿದ ಒಡೆಯರ್ ವಂಶದ ಅರಸರ ಖಾಸಗೀ ನಿವಾಸ ಮತ್ತು ದರ್ಬಾರ್ ಹಾಲ್ ಆಗಿದ್ದಿತು.

ದಿನನಿತ್ಯ ದೀಪಾಲಂಕಾರದಿಂದ ಕಂಗೊಳಿಸುವ ಅರಮನೆಗೆ ದಸರಾ ವೇಳೆ ವಿಶೇಷ ಅಲಂಕಾರ. ಅರಮನೆಗೆ ಅರಮನೆಯೇ ಸಾಟಿ. ಈ ವೇಳೆ ಸಾರ್ವಜನಿಕ ವೀಕ್ಷಣೆಗೆ ಅರಮನೆ ಲಭ್ಯ. ಅರಸು ಕಾಲದ ಆ ವೈಭವನ್ನು ಕಣ್ಣಲ್ಲಿ ತುಂಬಿಕೊಂಡಷ್ಟೂ ತುಳುಕುತ್ತದೆ. ನೋಡಿದಷ್ಟೂ ಮುಗಿಯುವುದಿಲ್ಲ. ಮತ್ತೆ ಮತ್ತೆ ಕಣ್ ಸೆಳೆಯುತ್ತದೆ.

ಜಗನ್ಮೋಹನ ಅರಮನೆ, ಜಯಲಕ್ಷ್ಮಿ ವಿಲಾಸ, ಕಾರಂಜಿ ಮಹಲ್, ಲಲಿತ ಮಹಲ್, ಚೆಲುವಾಂಬ ಮಹಲ್ ಇಲ್ಲಿರುವ ಇತರ ಪ್ರಮುಖ ಅರಮನೆಗಳು.

ಇಂಡೋ ಸಾರ್ಸನಿಕ್ ಶೈಲಿಯ ನಿರ್ಮಾಣದ ಅಂಬಾವಿಲಾಸವನ್ನು ಕಲ್ಲಿನಲ್ಲಿ ಕಟ್ಟಲಾಗಿದ್ದು, ಮೂರು ಮಹಡಿಗಳಿವೆ. ಅರಮನೆಯ ಸುತ್ತಲೂ ವಿಶಾಲವಾದ ಹಸಿರು ಉದ್ಯಾನವಿದೆ. ಕಂಬಗಳಿಗೆ ಕೆಂಪು ಅಮೃತಶಿಲೆಯ ಹೊದಿಕೆ. ಒಳಗೆಲ್ಲಾ ಚಿನ್ನದ ಲೇಪನದ ಕಲಾ ವೈಭವ. ಈ ಅರಮನೆಯ ವಾಸ್ತುಶಿಲ್ಪಿ ಬ್ರಿಟಿಷ್ ಎಂಜಿನಿಯರ್ ಹೆನ್ರಿ ಇರ್ವಿನ್. 1897ರಲ್ಲಿ ರಾಜಕುಮಾರಿ ಜಯಲಕ್ಷಮ್ಮಣ್ಣಿಯವರ ವಿವಾಹದ ವೇಳೆಯಲ್ಲಿ ಅರಮನೆಗೆ ಬೆಂಕಿ ಬಿದ್ದು ನಾಶವಾದಾಗ ಮೈಸೂರು ಮಹಾರಾಣಿಯವರಾಗಿದ್ದ ಕೆ೦ಪನ೦ಜಮ್ಮಣ್ಣಿ, ವಾಣಿವಿಲಾಸ ಸನ್ನಿಧಾನ ಹೊಸ ಅರಮನೆಯ ನಿರ್ಮಾಣಕ್ಕೆ ಮುಂದಾದರು.

ವಿವಿಧ ರೀತಿಯ ವಾಸ್ತುಕಲೆಗಳನ್ನು ಸಂಯೋಜಿಸಲಾಗಿದ್ದು, ಹಿಂದೂ, ಮುಸ್ಲಿಂ ಮತ್ತು ಗೋಥಿಕ್ ಶೈಲಿಯ ವಾಸ್ತುವನ್ನು ಪ್ರಮುಖವಾಗಿ ಬಳಸಲಾಗಿದೆ. ಅರಮನೆಯ ಮುಂಭಾಗದಲ್ಲಿ ಏಳು ವಿಶಾಲವಾದ ಮತ್ತು ಎರಡು ಚಿಕ್ಕ ಕಮಾನುಗಳಿವೆ. ಮಧ್ಯದ ಕಮಾನಿನ ಮೇಲಿರುವ ಗಜಲಕ್ಷ್ಮಿಯ ಶಿಲ್ಪ ಹೃದಯಂಗಮ.

ಅರಮನೆಯ ಕೋಣೆಗಳು:

ಮುಘಲ್ ದೊರೆಗಳ ಅರಮನೆಗಳ ಶೈಲಿಯ ದಿವಾನ್-ಇ-ಖಾಸ್ ಅತೀ ವೈಭವವನ್ನು ಚಿಮ್ಮುತ್ತದೆ. ಪ್ರಪಂಚದ ಪ್ರಮುಖ ಕಲೆಗಳ ಕೆತ್ತನೆ, ಅತಿ ಸುಂದರ ಸ್ತಂಭಗಳು, ಕರಿಮರದ ಕೆತ್ತನೆಯ ದಂತಖಚಿತ ವಿಶಾಲವಾದ ಬಾಗಿಲುಗಳು, ಹರಳುಗಳ ಅಲಂಕೃತ, ಕನ್ನಡಿಯಂದದ ನೆಲ, ಇವೆಲ್ಲವುಗಳ ಅಲಂಕಾರ ನೋಡಿದಷ್ಟೂ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಅತ್ಯಂತ ಗಣ್ಯರ ಆಗಮನದ ವೇಳೆ ಖುದ್ದು ರಾಜರು ಅತಿಥಿಗಳನ್ನು ಎದುರುಗೊಳ್ಳುತ್ತಿದ್ದ ಸ್ಥಳವಂತೆ ಇದು.

ಅಂತೆಯ ರಾಜರುಗಳು ದರ್ಬಾರು ನಡೆಸುತ್ತಿದ್ದ, ದರ್ಬಾರ್ ಹಾಲ್, ದಿವಾನ್-ಇ-ಆಮ್ ಕಲ್ಯಾಣ ಮಂಟಪ, ಗೊಂಬೆ ತೊಟ್ಟಿ ಇವುಗಳು ಇತಿಹಾಸವನ್ನು ಸಾರುತ್ತಿವೆ. ಕಲ್ಯಾಣ ಮಂಟಪದ ಗೋಡೆಯ ಮೇಲೆ ಬರೆದಿರುವ ಚಿತ್ತಾರಗಳು, ತೈಲವರ್ಣದ ಕಲಾಕೃತಿಗಳು ಹಿಂದಿನ ಕಾಲದ ಮೆರವಣಿಗೆ ಮತ್ತು ದಸರಾದ ಭವ್ಯತೆಯನ್ನು ಬಿಂಬಿಸುತ್ತವೆ. ಗೊಂಬೆತೊಟ್ಟಿಯಲ್ಲಿ ಹಳೆಯ ಸಾಂಪ್ರದಾಯಿಕ ಗೊಂಬೆಗಳಿವೆ. ಆಗ ಅರಸೊತ್ತಿಗೆಯ ಮಂದಿಯನ್ನೊಯ್ಯಲು ಬಳಸುತ್ತಿದ್ದ 84 ಕೆಜಿ ಚಿನ್ನದ ಕುಸುರಿಯಿಂದ ಅಲಂಕರಿಸಿರುವ ಮರದ ಅಂಬಾರಿ ಇಲ್ಲಿದೆ.

ಆಯುಧಶಾಲೆ:

ಬೇರೆಲ್ಲ ಕೋಣೆಯದ್ದು ಒಂದು ತೂಕವಾದರೆ, ಆಯುಧಶಾಲೆಯದ್ದು ಇನ್ನೊಂದು ತೂಕ. ರಾಜಮನೆತನದವರು ಬಳಸುತ್ತಿದ್ದ ವಿವಿಧ ಬಗೆಯ ಆಯುಧಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. 14ನೆ ಶತಮಾನದಲ್ಲಿ ಉಪಯೋಗಿಸಲ್ಪಡುತ್ತಿದ್ದ ಖಡ್ಗ, ಸುರಗಿ, ವ್ಯಾಘ್ರನಖ ಮುಂತಾದ ಆಯುಧಗಳ ತಾಳಕ್ಕೆ 20ನೆಯ ಶತಮಾನದ ಪಿಸ್ತೂಲುಗಳು, ಬ೦ದೂಕುಗಳ ಮೇಳವಿದೆ.

ಒಡೆಯರ್ ವ೦ಶದ ಪ್ರಸಿದ್ಧ ಅರಸು ರಣಧೀರ ಕ೦ಠೀರವ ಅವರು ಉಪಯೋಗಿಸಿದ್ದ ಖಡ್ಗಗಳಲ್ಲಿ ಒ೦ದಾದ 'ವಜ್ರಮುಷ್ಠಿ' ಇಲ್ಲಿದೆ. ಇನ್ನು ಕೆಲವುಗಳು ಮೈಸೂರು ಹುಲಿ ಟೀಪು ಸುಲ್ತಾನ್ ಮತ್ತು ಹೈದರ್ ಅಲಿ ಉಪಯೋಗಿಸುತ್ತಿದ್ದ ಖಡ್ಗಗಳು.

ಅರಮನೆಯ ಆವರಣದಲ್ಲಿ 12 ದೇವಾಲಯಗಳಿವೆ. ಇವುಗಳಲ್ಲಿ ಸೋಮೇಶ್ವರ ಮತ್ತು ಲಕ್ಷ್ಮೀರಮಣ ದೇವಾಲಯಗಳು ಸುಪ್ರಸಿದ್ಧ. 14ನೆ ಶತಮಾನದಲ್ಲಿ ನಿರ್ಮಾಣವಾಗಿರುವ ಕೋಡಿಭೈರವನ ದೇವಾಲಯ ಅತ್ಯಂತ ಪುರಾತನವಾಗಿದ್ದರೆ, 1953ರಲ್ಲಿ ನಿರ್ಮಾಣವಾಗಿರುವ ದೇವಾಲಯ ಇತ್ತೀಚಿನದ್ದು.

Share this Story:

Follow Webdunia kannada