Select Your Language

Notifications

webdunia
webdunia
webdunia
webdunia

ಶಾಹಿದ್, ಪ್ರಿಯಾಂಕಾ ಜೋಡಿಯ 'ಕಮೀನೇ' ಸೂಪರ್ಬ್!

ಶಾಹಿದ್, ಪ್ರಿಯಾಂಕಾ ಜೋಡಿಯ 'ಕಮೀನೇ' ಸೂಪರ್ಬ್!
IFM
ಶಾಹಿದ್ ಕಪೂರ್, ಪ್ರಿಯಾಂಕಾ ಛೋಪ್ರಾ ತಾರಾಗಣದ ಬಹುನಿರೀಕ್ಷೆಯ ಕಮೀನೇ ಚಿತ್ರ ಹೊರಬಂದಿದೆ. ಚಿತ್ರವನ್ನು ಒಂದೇ ಮಾತಿನಲ್ಲಿ ಹೇಳೋದಾದರೆ, ಇದು ಊಹಿಸಲಾಗದ ರೀತಿಯಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿದೆ. ಈವರೆಗೆ ತನ್ನ ಎಲ್ಲಾ ಪಾತ್ರಗಳಿಗೂ ನ್ಯಾಯ ಸಲ್ಲಿಸಿ ನಟಿಸುತ್ತಿದ್ದ ಶಾಹಿದ್ ಕಪೂರ್ ಈ ಬಾರಿ ಅತ್ಯದ್ಭುತ ರೀತಿಯಲ್ಲಿ ನಟಿಸಿದ್ದಾರೆ ಎಂಬುದು ಸುಳ್ಳಲ್ಲ. ಅವರ ದ್ವಿಪಾತ್ರ ಕಮೀನೇ ಚಿತ್ರಕ್ಕೆ ಅದ್ಭುತ ಕೊಡುಗೆ. ಅಷ್ಟೇ ಅಲ್ಲ, ಶಾಹಿದ್ ಕಮೀನೇ ಮೂಲಕ ತನಗೆ ಈವರೆಗೆ ಇದ್ದ ಚಾಕೋಲೇಟ್ ಹೀರೋ ಇಮೇಜಿನಿಂದ ಹೊರಬಂದು ಸೂಪರ್ ಸ್ಟಾರ್ ಪಟ್ಟಕ್ಕೆ ಪೈಪೋಟಿ ನಡೆಸಲಿದ್ದಾರೆ ಎಂದರೂ ಉತ್ಪ್ರೇಕ್ಷೆಯಲ್ಲ.

'ಹಮ್' ಚಿತ್ರದ 'ಜುಮ್ಮಾ ಚಮ್ಮಾ... ', 'ತೇಝಾಬ್' ಚಿತ್ರದ 'ಏಕ್ ದೋ ತೀನ್...', 'ಖಳ್‌ನಾಯಕ್' ಚಿತ್ರದ 'ಛೋಲಿ ಕೇ ಪೀಚೇ ಕ್ಯಾ ಹೈ..'ಯಂತಹ ಹಾಡುಗಳಂತೆ ಈ ಬಾರಿ ಕಮೀನೇ ಚಿತ್ರದ 'ಢನ್ ಟೇ ನಾನ್...' ಹಾಡು ಭಾರೀ ಜನಪ್ರಿಯತೆ ಗಳಿಸಿದರೆ ಆಶ್ಚರ್ಯವಿಲ್ಲ. ಈ ಹಾಡು ಪ್ರಾರಂಭವಾಗುತ್ತಿದ್ದಂತೆ ಕಾಲುಗಳು ಕುಣಿಯಲಾರಂಭಿಸುತ್ತದೆ. ಹಾಡಿನ ಬೀಟ್ಸ್‌ ಅಂತಹುದು.

webdunia
IFM
ಆದರೆ ಕಮೀನೇ ಭಾರೀ ಮಸಾಲಾ ಸಿನಿಮಾವಂತೂ ಖಂಡಿತ ಅಲ್ಲ. ಆದರೆ ಅತ್ಯುತ್ತಮ ಸಿನಿಮಾ ಎಂದು ಧಾರಾಳವಾಗಿ ಹೇಳಬಹುದು. ಯಾಕೆಂದರೆ ಚಿತ್ರವನ್ನು ಸುಮ್ಮನೆ ಕೂತು ಹರಟೆ ಹೊಡೆಯುತ್ತಾ ನೋಡಲು ಸಾಧ್ಯವಿಲ್ಲ. ತುಂಬ ಆಸಕ್ತಿವಹಿಸಿ ಯಾವುದೇ ದೃಶ್ಯ ಕಣ್ತಪ್ಪದಂತೆ ನೋಡಿದರೆ ಚಿತ್ರ ಅರ್ಥವಾಗಬಹುದು. ಯಾಕೆಂದರೆ ಚಿತ್ರದಲ್ಲಿ ಹಲವು ಟ್ವಿಸ್ಟ್‌ಗಳಿವೆ. ಚಿತ್ರ ಎಲ್ಲರಿಗೂ ಇಷ್ಟವಾಗಬಹುದು ಎಂದು ಹೇಳಲಾಗದಿದ್ದರೂ, ಈ ಚಿತ್ರವ್ನನು ಯಾರಿಗೂ ಅಲಕ್ಷ್ಯ ಮಾಡಲು ಖಂಡಿತಾ ಸಾಧ್ಯವಿಲ್ಲ.

ಕಮೀನೇ ಚಿತ್ರ ಇಬ್ಬರು ಅವಳಿ ಸಹೋದರರ ಕಥೆ. ಚಾರ್ಲಿ ಹಾಗೂ ಗುಡ್ಡು (ಶಾಹಿದ್ ಕಪೂರ್) ಅವಳಿ ಸಹೋದರರು. ಚಾರ್ಲಿಗೆ ಸ್ವಲ್ಪ ತೊದಲುವಿಕೆ ಇದ್ದರೆ ಗುಡ್ಡುವಿಗೆ ಉಗ್ಗು (ಬಿಕ್ಕಳಿಕೆ) ಇರುತ್ತದೆ. ನೋಡಲು ಒಂದೇ ತೆರನಾಗಿರೋದು ಬಿಟ್ಟರೆ, ಈ ಇಬ್ಬರಿಗೂ ಇದೊಂದೇ ಸಾಮ್ಯತೆ. ಬೇರೆ ಎಲ್ಲಾ ವಿಚಾರಗಳಲ್ಲೂ ಇವರಿಬ್ಬರು ತದ್ವಿರುದ್ಧ. ಚಾರ್ಲಿಗೆ ಬಹುಬೇಗನೆ ಶ್ರೀಮಂತನಾಗುವ ಕನಸಿದ್ದರೆ, ಗುಡ್ಡು ಹಾಗಲ್ಲ. ಶ್ರಮವಹಿಸಿ ಕೆಲಸ ಮಾಡುವ ವರ್ಗದವನು. ಇಂತಿಪ್ಪ ಸಂದರ್ಭ ಗುಡ್ಡುವಿನ ಜೀವನದಲ್ಲಿ ಸ್ವೀಟಿ (ಪ್ರಿಯಾಂಕಾ ಛೋಪ್ರಾ)ಯ ಆಗಮನವಾಗುತ್ತದೆ.

webdunia
IFM
20 ನಿಮಿಷಗಳ ನಂತರ ಚಿತ್ರ ಬೇರೆಯೇ ಲೋಕಕ್ಕೆ ನಿಮ್ಮನ್ನು ಕೊಂಡೊಯ್ಯುತ್ತದೆ. ಡ್ರಗ್ಸ್ ಜಗತ್ತು, ಗನ್, ಪೊಲೀಸರು, ರಾಜಕೀಯ ಎಲ್ಲವುಗಳ ಪ್ರವೇಶವಾಗುತ್ತದೆ. ಬೇರೆಬೇರೆಯಾದ ಅವಳಿಗಳು ಮುಖಾಮುಖಿಯಾಗುವ ಸನ್ನಿವೇಶವೂ ಸೃಷ್ಟಿಯಾಗುತ್ತದೆ. ಇಂಟರ್ವಲ್‌ ಹೊತ್ತಿಗೆ ಚಿತ್ರದಲ್ಲಿ ಭಾರೀ ಕುತೂಹಲ ನಿಮ್ಮಲ್ಲಿ ಸೃಷ್ಟಿ ಮಾಡಿರುತ್ತದೆ. ಅಂತ್ಯದಲ್ಲಿ ಚಿತ್ರ ಜ್ವಾಲಾಮುಖಿಯಾಗುತ್ತದೆ. ಚಿತ್ರದಲ್ಲಿರುವ ಹಿಂಸಾತ್ಮಕ ಅಂತ್ಯ ಬಹುಶಃ ಎಲ್ಲರಿಂದಲೂ ಸ್ವಾಕೃತವಾಗಲಿಕ್ಕಿಲ್ಲವಾದರೂ, ಚಿತ್ರವನ್ನು ಅದ್ಭುತವಾಗಿ ನಿರೂಪಿಸುವಲ್ಲಿ ನಿರ್ದೇಶಕ ವಿಶಾಲ್ ಭಾರದ್ವಾಜ್ ಗೆದ್ದಿದ್ದಾರೆ. ಆ ಮೂಲಕ ತಾನೊಬ್ಬ ಅದ್ಭುತ ಕಥೆಗಾರ ಎಂಬುದನ್ನೂ ವಿಶಾಲ್ ತೋರಿಸಿಕೊಟ್ಟಿದ್ದಾರೆ.

ಚಿತ್ರದ ಸಂಭಾಷಣೆಗೂ ಫುಲ್ ಮಾರ್ಕ್ ನೀಡಬೇಕು. ಅದರಲ್ಲೂ ಭಾರದ್ವಾಜ್ ಗೆದ್ದಿದ್ದಾರೆ. ಢನ್ ಟೇ ನಾನ್ ಹಾಡಿನ ಹೊರತು ಉಳಿದ ಹಾಡುಗಳೆಲ್ಲವೂ ರಾಕಿಂಗ್ ಆಗಿಲ್ಲ. ಆದರೂ ಚಿತ್ರವನ್ನು ಕಟ್ಟಿಕೊಡುವಲ್ಲಿ ಹಾಡು ಬಳಕೆಯಾಗಿ ಕೇಳುವಂತೆ ಮಾಡುತ್ತದೆ.

webdunia
IFM
ನಟನೆಯಲ್ಲಿ ಹೇಳೋದಾದರೆ, ಶಾಹಿದ್ ಕಪೂರ್ ಅದ್ಭುತ. ಗುಡ್ಡು ಹಾಗೂ ಚಾರ್ಲಿ ಎರಡು ಪಾತ್ರಗಳೂ ಸೂಪರ್ಬ್ ಎಂಬಲ್ಲಿ ಎರಡು ಮಾತಿಲ್ಲ. ಪ್ರಿಯಾಂಕಾ ಛೋಪ್ರಾಗೂ ಚಿತ್ರದ ಶ್ರೇಯಸ್ಸು ಸಲ್ಲಬೇಕು. ಪ್ರಿಯಾಂಕಾ ಫ್ಯಾಷನ್ ನಂತರ ಮತ್ತೊಮ್ಮೆ ತಾನೊಬ್ಬ ಅತ್ಯುದ್ಭುತ ನಟಿ ಎಂದು ಸಾಬೀತುಪಡಿಸಿದ್ದಾರೆ. ಸಾದಾ ಮರಾಠಿ ಹುಡುಗಿಯಾಗಿ, ಅದೇ ಮಹಾರಾಷ್ಟ್ರದ ಶೈಲಿಯ ಭಾಷೆಯಲ್ಲಿ ಮಾತನಾಡುವ ಮೂಲಕ ಪ್ರಿಯಾಂಕ ಗೆದ್ದಿದ್ದಾರೆ.

ಇನ್ನು ಅಮೋಲ್ ಗುಪ್ತೆ ಕೂಡಾ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಚಂದನ್ ರಾಯ್ ಸನ್ಯಾಲ್, ಶಿವಸುಬ್ರಹ್ಮಣಿಯನ್, ಹೃಷಿಕೇಶ್ ಜೋಷಿ ಎಲ್ಲರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಪ್ಲಸ್ ಪಾಯಿಂಟ್ ವಿಶಾಲ್ ಭಾರದ್ವಾಜ್, ಶಾಹಿದ್ ಕಪೂರ್, ಪ್ರಿಯಾಂಕಾ ಛೋಪ್ರಾ ಹಾಗೂ ಢನ್ ಟೇ ನಾನ್ ಹಾಡು. ಇವಿಷ್ಟಕ್ಕಾಗಿಯಾದರೂ ಚಿತ್ರ ನೋಡಲು ಚಿತ್ರರಸಿಕರು ಧಾರಾಳವಾಗಿ ಹೋಗುತ್ತಾರೆ.

ಶುಕ್ರವಾರ ಕೃಷ್ಣ ಜನ್ಮಾಷ್ಟಮಿ, ಶನಿವಾರ ಸ್ವಾತಂತ್ರ ದಿನಾಚರಣೆ ಪ್ರಯುಕ್ತದ ರಜೆ ಹಾಗೂ ಭಾನುವಾರ ರಜೆ ಇರುವುದರಿಂದ ಚಿತ್ರದ ಕಲೆಕ್ಷನ್ ಕೂಡಾ ಅದ್ಭುತವಾಗಿರುವ ನಿರೀಕ್ಷೆಯಿದೆ. ಆದರೆ ಮುಂಬೈ ಸೇರಿದಂತೆ ಹಲವೆಡೆ ಹಂದಿಜ್ವರದ ಭೀತಿಯಿಂದ ಹಲವು ಥಿಯೇಟರ್‌ಗಳು ಬಾಗಿಲು ಮುಚ್ಚಿರುವುದರಿಂದ ಇದು ಚಿತ್ರದ ಕಲೆಕ್ಷನ್ ಮೇಲೆ ಪರಿಣಾಮ ಬೀರುವ ಬಗ್ಗೆಯೂ ಗುಮಾನಿಯಿದೆ.

Share this Story:

Follow Webdunia kannada