Select Your Language

Notifications

webdunia
webdunia
webdunia
webdunia

ರಾಝ್- ಬೆಚ್ಚಿ ಬೀಳಿಸುವ ಕುತೂಹಲಕಾರಿ ಕಥಾನಕ

ರಾಝ್- ಬೆಚ್ಚಿ ಬೀಳಿಸುವ ಕುತೂಹಲಕಾರಿ ಕಥಾನಕ
, ಮಂಗಳವಾರ, 27 ಜನವರಿ 2009 (18:11 IST)
ಚಿತ್ರ: ರಾಝ್- ದಿ ಮಿಸ್ಟರಿ ಕಂಟಿನ್ಯೂಸ್
ತಾರಾಗಣ: ಎಮ್ರಾನ್ ಹಷ್ಮಿ, ಕಂಗನಾ ರಣಾವತ್, ಅಧ್ಯನ್ ಸುಮನ್
ನಿರ್ದೇಶಕ: ಮೋಹಿತ್ ಸೂರಿ
ನಿರ್ಮಾಪಕ: ಮಹೇಶ್ ಭಟ್

ಮಹೇಶ್ ಭಟ್ ಮತ್ತೊಂದು ರಾಝ್‌ನೊಂದಿಗೆ ಮರಳಿದ್ದಾರೆ. ಇಲ್ಲಿ ಹಳೆಯ ರಾಝ್‌ನಲ್ಲಿದ್ದ ಡಿನೋ ಮೊರಿಯಾ, ಬಿಪಾಶಾ ಬಸು ಜಾಗಕ್ಕೆ ಎಮ್ರಾನ್ ಹಷ್ಮಿ, ಕಂಗನಾ ರಣಾವತ್, ಅಧ್ಯಯನ್ ಸುಮನ್‌ರನ್ನು ಆರಿಸಿಕೊಂಡಿರುವುದು ವಿಶೇಷ. ಆದರೆ ಹಳೆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ನಟರು ಬದಲಾದಂತೆ ಇಲ್ಲಿ ನಿರ್ದೇಶಕರು ಕೂಡ ಬದಲಾಗಿದ್ದಾರೆ. 2002ರ ರಾಝ್ ನಿರ್ದೇಶಕ ವಿಕ್ರಮ್ ಭಟ್. ಈ ಚಿತ್ರವನ್ನು ನಿರ್ದೇಶಿಸಿದವರು ಮೋಹಿತ್ ಸೂರಿ.

ಎಮ್ರಾನ್ ಹಷ್ಮಿ, ಕಂಗನಾ ರಣಾವತ್ ತಮ್ಮ ಅನುಭವವನ್ನು ಇಲ್ಲಿ ಧಾರೆಯೆರೆದಿದ್ದಾರೆ. ಜತೆಗೆ ಅಧ್ಯಯನ್ ತಾನೇನು ಕಡಿಮೆಯಿಲ್ಲ ಎಂಬುದನ್ನು ತೋರಿಸಲು ಯತ್ನಿಸಿದ್ದಾರೆ. ಸಂಗೀತದ ವಿಚಾರಕ್ಕೆ ಬಂದಾಗ ಹಳೆ ರಾಝ್ ಎದುರು ಹೊಸ ರಾಝ್ ಸರಿಸಾಟಿಯಲ್ಲ.

ಇಲ್ಲಿ ಹೊಸ ಕಥೆಯೇ ಆರಂಭವಾಗುತ್ತದೆ. ಆಸಕ್ತಿ ಕೆರಳಿಸುತ್ತಾ ಹೋಗುವ 'ರಾಝ್- ದಿ ಮಿಸ್ಟರಿ ಕಂಟಿನ್ಯೂಸ್' ಎಲ್ಲೂ ಬೋರ್ ಹೊಡೆಸದೆ, ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಕಥೆ ಆರಂಭವಾಗುವುದು ಒಬ್ಬ ಆಂಗ್ಲ ವ್ಯಕ್ತಿಯ ಮ‌ೂಲಕ. ಆತ ಒಂದು ಮಧ್ಯರಾತ್ರಿ ಕಾಲಿಂದಿ ದೇವಸ್ಥಾನಕ್ಕೆ ಹೋಗಿರುತ್ತಾನೆ. ಆಗ ಅಲ್ಲಿ ದೇವಳದ ಪೂಜಾರಿ ತನ್ನ ದೇಹವನ್ನು ಇಬ್ಭಾಗವಾಗಿ ಕತ್ತಿಯಿಂದ ಸೀಳಿ ಅದರ ನಡುವೆ 'ಓಂ' ಎಂದು ಬರೆದಿರುವುದನ್ನು ಕಂಡು ಬೆಚ್ಚಿ ಆಂಗ್ಲ ವ್ಯಕ್ತಿ ಓಡಿ ಹೋಗುತ್ತಾನೆ. ನಂತರ ಕಥೆಯು ಮಗ್ಗುಲು ಬದಲಾಯಿಸುತ್ತದೆ. ಯುವ ಮಾಡೆಲ್ ನಂದಿತಾ (ಕಂಗನಾ ರಣಾವತ್) ಸಿನಿಮಾ ನಿರ್ದೇಶಕ ಯಶ್ (ಅಧ್ಯಯನ್ ಸುಮನ್) ಜತೆ ಪ್ರೀತಿಯಲ್ಲಿ ಬಿದ್ದಿರುತ್ತಾಳೆ. ಯಶ್ ಮ‌ೂಢನಂಬಿಕೆಗಳ ಕುರಿತು ಕಾರ್ಯಕ್ರಮಗಳನ್ನು ಕೂಡ ನಡೆಸುವಾತ. ಒಂದು ದಿನ 'ಅಂಧಾದಿವಸ್' ಕಾರ್ಯಕ್ರಮದಲ್ಲಿ ಭೂತ, ಪ್ರೇತಗಳ ಬಗ್ಗೆ ನಾನಾ ತರದ ಪ್ರಯೋಗಗಳನ್ನು ಮಾಡಿ ತೋರಿಸಿ, ಅದೆಲ್ಲ ಮ‌ೂಢನಂಬಿಕೆ ಎಂದು ಸಾರಿ ಹೇಳುತ್ತಾನೆ. ನಂತರ ನಂದಿತಾಳಿಗೆ ಒಂದು ಅಪಾರ್ಟ್‌ಮೆಂಟನ್ನು ಉಡುಗೊರೆಯಾಗಿ ಯಶ್ ನೀಡುತ್ತಾನೆ. ಆ ಹೊತ್ತಿಗಾಗಲೇ ಆಕೆ ಗರ್ಭವತಿಯಾಗಿರುತ್ತಾಳೆ.

ನಂದಿತಾ ಒಂದು ಸಂಜೆ ಪೃಥ್ವಿ (ಎಮ್ರಾನ್ ಹಷ್ಮಿ)ಯನ್ನು ಎದುರಾಗುತ್ತಾಳೆ. ಆತ ಅತೀಂದ್ರಿಯ ಶಕ್ತಿಯುಳ್ಳ ಕಲಾಕಾರ. ನಂದಿತಾಳ ಚಿತ್ರವನ್ನು ನಾಲ್ಕು ತಿಂಗಳ ಹಿಂದೆಯೇ ತಾನು ಬಿಡಿಸಿರುವುದಾಗಿ ಆತ ಹೇಳುತ್ತಾನೆ. ತನ್ನ ಮಣಿಕಟ್ಟು ಕೊಯ್ಯಲ್ಪಟ್ಟು ರಕ್ತ ಜಿಣುಗುತ್ತಿರುವ ನಂದಿತಾ ಕೆಳಗೆ ಅಂಗಾತ ಬಿದ್ದಿರುವ ಚಿತ್ರಣವಿರುವ ಪೈಂಟಿಂಗ್ ಆಕೆಗೆ ತೋರಿಸುತ್ತಾನೆ. ಸಂಶಯವೇ ಇಲ್ಲ. ಅದು ಆಕೆಯೇ! ನೀವು ಅಪಾಯದಲ್ಲಿದ್ದೀರಿ ಎಂದು ಪೃಥ್ವಿ ನಂದಿತಾಳನ್ನು ಎಚ್ಚರಿಸುತ್ತಾನೆ. ಆದರೆ ನಂದಿತಾ ಅದನ್ನು ನಂಬಿರುವುದಿಲ್ಲ.

ಆದರೆ ಬಾತ್‌ರೂಮಿನಲ್ಲಿದ್ದಾಗ ಕಾಕತಾಳೀಯವಾಗಿ ಮಣಿಕಟ್ಟು ಕೊಯ್ದು ರಕ್ತ ಧಾರಾಕಾರ ನಂದಿತಾ ಕೈಯಿಂದ ಹರಿಯತೊಡಗುತ್ತದೆ. ನಂತರ ಪೃಥ್ವಿ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸುತ್ತಾನೆ. ಆಸ್ಪತ್ರೆಗೆ ಧಾವಿಸುವ ಯಶ್‌ಗೆ ಆಘಾತದ ವಿಚಾರ ತಿಳಿದು ಬರುತ್ತದೆ. ವಿಪರೀತ ರಕ್ತಸ್ರಾವವಾಗಿರುವ ಕಾರಣ ಆತನ ಪ್ರೇಯಸಿಗೆ ಅದಾಗಲೇ ಗರ್ಭಪಾತವಾಗಿರುತ್ತದೆ. ಇದಕ್ಕೆಲ್ಲ ಪೃಥ್ವಿಯೇ ಕಾರಣ ಎಂದು ನಂದಿತಾ ದೂರಿದ ಕಾರಣ ಯಶ್ ಆತನನ್ನು ಪೊಲೀಸರ ವಶಕ್ಕೊಪ್ಪಿಸುತ್ತಾನೆ.

ಹಿಮಾಚಲ ಪ್ರದೇಶದ ಕಾಲಿಂದಿಯ ರಾಸಾಯನಿಕ ಕಾರ್ಖಾನೆಯ ಮಾಲಿಕ ಆಂಗ್ಲ ವ್ಯಕ್ತಿಯಾಗಿರುವ ಡೇವಿಡ್ ಕೂಪರ್ ತನ್ನದೇ ರಕ್ತದಿಂದ ಗೋಡೆಯಲ್ಲಿ 'ನೀನು ಅಶುದ್ಧ, ನೀನು ಕೊಳಕ' ಎಂದು ತನ್ನ ಬಗ್ಗೆಯೇ ಬರೆದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ನಂತರ ನಂದಿತಾ ಉದ್ವೇಗಗೊಂಡು ಆಕ್ರಮಣಕಾರಿಯಾಗುವ ಮತ್ತೊಂದು ಚಿತ್ರವನ್ನು ಪೃಥ್ವಿ ರಚಿಸುತ್ತಾನೆ. ಬೆಚ್ಚಿಬಿದ್ದ ಆತ ನಂದಿತಾಳನ್ನು ರಕ್ಷಿಸಲೆಂದು ಆಕೆ ಭಾಗವಹಿಸಿದ್ದ ಫ್ಯಾಷನ್ ಶೋದತ್ತ ಧಾವಿಸುತ್ತಾನೆ. ಅಷ್ಟೊತ್ತಿಗಾಗಲೇ ಆಕೆ ಫ್ಯಾಷನ್ ಶೋಗೆಂದು ಬಂದಿದ್ದ ಧಾರ್ಮಿಕ ಗುರುವೊಬ್ಬನನ್ನು 'ನೀನು ಅಶುದ್ಧ, ನೀನು ಕೊಳಕ' ಎಂದು ನಿಂದಿಸಿ ಗಲಾಟೆ ಎಬ್ಬಿಸಿರುತ್ತಾಳೆ. ಪೃಥ್ವಿ ರಕ್ಷಣೆಗೆಂದು ಬಂದರೂ ಗಾರ್ಡ್‌ಗಳು ಅವಕಾಶ ನೀಡುವುದಿಲ್ಲ. ನಂತರ ಆಕೆಯನ್ನು ಗುರೂಜಿ ಮತ್ತು ಪ್ರೇಕ್ಷಕರೆಡೆಯಿಂದ ದೂರ ಸಾಗಿಸಲಾಗುತ್ತದೆ. ಗುರು ಟೀವಿ ಚಾನೆಲ್‌ನಲ್ಲಿ ಬಂದು, ಅವಳಿಗೆ ಭ್ರಾಂತಿಯಾಗಿದೆ, ಯಾರೋ ಮೈ ಮೇಲೆ ಬಂದಿದ್ದಾರೆ ಎಂದು ಹೇಳಿಕೆ ನೀಡುತ್ತಾನೆ. ಇದನ್ನು ತಿಳಿದುಕೊಂಡ ಯಶ್ ಆಕೆಯ ಪರವಾಗಿ ಕ್ಷಮೆ ಕೇಳುವುದಲ್ಲದೆ, ನಂದಿತಾಳಿಗೆ ಮಾನಸಿಕ ಸಮಸ್ಯೆಗಳಿವೆ ಎಂದು ಹೇಳುತ್ತಾನೆ.

ಕ್ರಮೇಣ ಪೃಥ್ವಿಯ ಕಡೆ ಆಕರ್ಷಿತಳಾಗುವ ನಂದಿತಾ ಯಶ್‌ನನ್ನು ಮರೆಯಲಾರಂಭಿಸುತ್ತಾಳೆ. ಆತನ ಜತೆಗೆ ವಾಸಿಸುತ್ತಾ ಸಾಕಷ್ಟು ಆವಾಂತರಗಳನ್ನು ಎದುರಿಸುತ್ತಾಳೆ. ಕೊನೆಗೆ ಆಕೆ ಯಾರ ಜತೆ ಉಳಿಯುತ್ತಾಳೆ? ಈ ಯಶ್ ಯಾರು? ಇದರ ಹಿಂದಿನ ರಹಸ್ಯಗಳೇನು ಎಂಬುದನ್ನು ತಿಳಿಯಲು ಥೇಯೇಟರ್‌ನತ್ತ ಧಾವಿಸಬೇಕು.
IFM

Share this Story:

Follow Webdunia kannada