ಮಕ್ಕಳ ಚಿತ್ರವಲ್ಲ ಈ ತಾರೇ ಜಮೀನ್...
ಒಂದರ ಹಿಂದೆ ಒಂದು ಹಿಟ್ ಚಿತ್ರ (ರಂಗ್ ದೇ ಬಸಂತಿ, ಫನಾ) ನೀಡಿದ ಅಮೀರ್ ಖಾನ್ ಮೂರನೆಯ ಬಾರಿಯ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿ ಮಗುವಿನ ಮನಸ್ಥಿತಿಯ ಕುರಿತು ನಿರ್ದೇಶಿಸಿ ನಟಿಸಿದ ಚಿತ್ರ ಅಪರೂಪದ್ದು. ವಿಮರ್ಶೆಯ ಪ್ರಾರಂಭಕ್ಕೆ ಮುನ್ನ ಇಲ್ಲಿ ಒಂದು ಮಾತು ಸ್ಪಷ್ಟಪಡಿಸಬೇಕಾಗಿದೆ. ಇದು ಮಕ್ಕಳ ಚಿತ್ರವಲ್ಲ, ಮಕ್ಕಳ ಕುರಿತು ಇರುವ ಚಿತ್ರ. ಇಂದಿನ ಪೋಷಕರು ಮತ್ತು ನಾಳಿನ ಪೋಷಕರು ನೋಡಲೇಬೇಕಾದ ಚಿತ್ರ. ತಾರೇ ಜಮೀನ್ ಪರ್ ಕೇವಲ ಮನರಂಜನೆಗೆ ಸೀಮಿತವಾದ ಚಿತ್ರವಲ್ಲ. 18 ರೀಲುಗಳ ಕಥೆ ನಿಮ್ಮ ಎದುರು ಬಿಚ್ಚಿಡುತ್ತಿದ್ದಂತೆ ನಿಮಗೆ ಮಗುವಿನ ಮನಸ್ಥಿತಿ ಏನು ಅನ್ನುವುದು ಅರ್ಥವಾಗುತ್ತದೆ. ಶೈಕ್ಷಣಿಕವಾಗಿ ಮಕ್ಕಳು ಪ್ರಬಲರಾಗಬೇಕು ಎನ್ನುವ ಒಂದೇ ಉದ್ದೇಶದಿಂದ ಅವರ ಸುಪ್ತ ಪ್ರತಿಭೆಗೆ ಬೆಂಕಿ ಹಾಕುವುದು ಸರಿಯಲ್ಲ. ಸುಪ್ತ ಪ್ರತಿಭೆಯನ್ನು ಬೆಳೆಸುವುದು ಪೋಷಕರ ಮೊದಲ ಆದ್ಯತೆಯಾಗಬೇಕು. ಇದೇ ಸಂದೇಶ ಮನೆಗೆ ತೆರಳುವ ಸಮಯದಲ್ಲಿ ಮನದಲ್ಲಿ ಸುಳಿಯುತ್ತಿರುತ್ತದೆ. ಹಾಗೆ ನೋಡಿದರೆ ಈ ರೀತಿಯ ಸಲಹೆಗಳು ಶೈಕ್ಷಣಿಕ ತಜ್ಞರಿಂದ ಬಂದಿವೆ. ಆದರೆ ಪ್ರಭಾವಿಯಾಗಿ ಪೋಷಕರ ಮನತಟ್ಟುವ ರೀತಿಯಲ್ಲಿ ಹೇಳುವುದೇ ಒಂದು ಜಾಣ್ಮೆ. ಆ ಜಾಣ್ಮೆ ಅಮೀರ್ ಖಾನ್ ಅವರಲ್ಲಿ ಮಾತ್ರ ಇದೆ.ತಾರೇ ಜಮೀನ್... ಕಥೆಯ ಪ್ರಸ್ತುತಿ ನೇರವಾಗಿ ಹೃದಯವನ್ನು ತಟ್ಟುತ್ತದೆ. ಮುಗ್ಧ ಮಗುವಿನ ಮನಸ್ಸಿನ ಭಾವನೆಗಳ ಹಂದರವನ್ನು ಅಮೀರ್ ಖಾನ್ ಅದ್ಭುತವಾದ ರೀತಿಯಲ್ಲಿ ಹೆಣೆದಿದ್ದಾರೆ. ಈ ಮೂಲಕ ಬಾಲಿವುಡ್ ಜಗತ್ತು ಮಸಾಲೆಗಳಿಂದಾಚೆ ನೋಡಬಲ್ಲದು ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಅಮೀರ್ ಖಾನ್ ಚಿತ್ರದಲ್ಲಿ ಕ್ಯಾಮರಾ ಯಾವಾಗಲೂ ಅಮೀರ್ ಸುತ್ತಲೇ ಕೇಂದ್ರಿಕೃತವಾಗಿರುತ್ತದೆ ಎಂಬ ಆಪಾದನೆ ಇದೆ. ಹೌದು, ತಾರೇ ಜಮೀನ್...ನಲ್ಲಿ ಅಮೀರ್ ಮುಖ್ಯ ಭೂಮಿಕೆಯಲ್ಲಿ ಇರುವುದರಿಂದ ಇಲ್ಲಿಯೂ ಕ್ಯಾಮರಾದ ಕೆಲಸ ಅವರ ಸುತ್ತ ಇದೆ. ನಿರ್ದೇಶಕನಾಗಿ ಅಮೀರ್ ವಿಭಿನ್ನವಾಗಿ ಕಾಣುತ್ತಾರೆ. ಚಿತ್ರದ ಅಂತ್ಯದಲ್ಲಿ ಅಮೀರ್ ಖಾನ್ ಅವರನ್ನು ಹೇಗೆ ಗುರುತಿಸಬೇಕು ಅನ್ನುವುದೇ ಸವಾಲಿನ ಪ್ರಶ್ನೆಯಾಗಿ ಉಳಿದು ಬಿಡುತ್ತದೆ. ಅಮೀರ್ನ ಶ್ರೇಷ್ಠತೆ ವ್ಯಕ್ತವಾಗುವುದು ನಟನಾಗಿಯೋ ಅಥವಾ ನಿರ್ದೇಶಕನಾಗಿಯೋ ಎನ್ನುವುದೇ ಅತಿ ದೊಡ್ಡ ಪ್ರಶ್ನೆಯಾಗುತ್ತದೆ. ಅಮೀರ್ ಖಾನ್ ಅವರ ಬಗ್ಗೆ ಇನ್ನೊಂದು ಮೆಚ್ಚಿಗೆಯಾಗುವ ಅಂಶವೆಂದರೆ ಎಂಟು ವರ್ಷದ ಬಾಲಕನ ಅಭಿನಯವನ್ನು ಸಮರ್ಥವಾಗಿ ಬಳಸಿಕೊಂಡಿದ್ದು. ಸಂವೇದನಾಶೀಲ ಕಥೆಯನ್ನು ಬಾಲಕನ ಅಭಿನಯದಲ್ಲಿ ತೋರ್ಪಡಿಸುವುದು ಸಾಮಾನ್ಯ ವಿಚಾರವಲ್ಲ.
ಇಶಾನ್ ಅವಸ್ಥಿ ಪಾತ್ರದಲ್ಲಿ ಅಭಿನಯಿಸಿರುವ ದರ್ಶಿಲ್ ಸಫಾರಿ, ಅಭಿನಯದಲ್ಲಿ ಅಮೀರ್ ಖಾನ್ಗೆ ಸರಿಸಾಟಿಯಾಗಿ ನಿಂತಿದ್ದಾನೆ.