ಪೇಯಿಂಗ್ ಗೆಸ್ಟ್: ಪೇ ಮಾಡಿ ನೋಡೋದು ಟೈಮ್ ವೇಸ್ಟ್!
ಹಲವು ಬಾರಿ ನಾವು ಒಂದು ಪುಸ್ತಕದ ಚೆಂದನೆಯ ಕವರ್ ಪೇಜ್ ನೋಡಿ ಆಕರ್ಷಿತರಾಗುತ್ತೇವೆ. ಆದರೆ ಪುಸ್ತಕದೊಳಗಿರುವುದು ಲೊಳಲೊಟ್ಟೆ ಅಂತ ಅರ್ಥವಾಗುವಾಗ ಜೇಬಿನ ದುಡ್ಡು ಕಳೆದುಕೊಂಡಿರುತ್ತೇವೆ, ಹಾಗೆಯೇ ಹಲವು ಸಿನಿಮಾಗಳನ್ನೂ ನಾವು ಕೇವಲ ಚಿತ್ರದ ಪ್ರೋಮೋಗಳನ್ನು ನೋಡಿಯೋ, ಬ್ಯಾನರ್ ನೋಡಿಯೋ ಆಕರ್ಷಿತರಾಗುತ್ತೇವೆ. ಆದರೆ ಹೋಗಿ ನೋಡಿದರೆ, ಚಿತ್ರದ ಬೆಸ್ಟ್ ತುಣುಕುಗಳಷ್ಟೇ ಪ್ರೋಮೋದಲ್ಲಿ ಬಂದಿದೆ ಎಂದು ಅರ್ಥವಾಗುವ ಹೊತ್ತಿಗೆ ಜೇಬು ಖಾಲಿ. ಇದೇ ಅನುಭವ ನಿಮಗೆ ಪೇಯಿಂಗ್ ಗೆಸ್ಟ್ಸ್ ಚಿತ್ರ ನೋಡಿಯೂ ಆದರೆ ಆಶ್ಚರ್ಯವಿಲ್ಲ. ಹಲವು ಯಶಸ್ವೀ ನಾಟಕಗಳನ್ನು ನಿರ್ದೇಶಿಸಿರುವ, ಹಾಗೂ ಮೊದಲ ಬಾರಿಗೆ ಚಿತ್ರ ನಿರ್ದೇಶಿಸಿರುವ ಪರಿತೋಶ್ ಪೇಂಟರ್ ಯಾಕೋ ಹಳಿ ತಪ್ಪಿದ್ದಾರೆ. ಕಾಮಿಡಿ ಅನ್ನೋದು ಒಂದು ಸೀರಿಯಸ್ ಬ್ಯುಸಿನೆಸ್ ಎಂದು ಅವರು ಈ ಚಿತ್ರ ನಿರ್ದೇಶಿಸುವಾಗ ಅರ್ಥ ಮಾಡಿಕೊಂಡರೂ ಸಾಕಿತ್ತು.ಪೇಯಿಂಗ್ ಗೆಸ್ಟ್ಸ್ ಚಿತ್ರದ ಕಥಾ ಹಂದರವೇ ಬಲು ತೆಳು. ಜತೆಗೆ ಮೂಳೆಚಕ್ಕಳದಂತಿರುವ ಕಥೆಗೆ, ಅಲ್ಲಲ್ಲಿ ಮಾಂಸದ ಮುದ್ದೆಯಿಂದ ಪ್ಯಾಚ್‌ವರ್ಕ್ ಮಾಡಿದಂತೆ ಮಸಾಲೆ ಬೆರೆಸಿದ್ದಾರೆ. ಹೀಗಾಗಿ, ಮೊದಲ ಎರಡು ಗಂಟೆ ಕಾಲ ಚಿತ್ರವನ್ನು ಹೇಗೋ ಸಂಭಾಳಿಸಿಕೊಂಡು ಪ್ರೇಕ್ಷಕ ನೋಡಬಹುದಾದರೂ ನಂತರ ಒಂದು ಗಂಟೆ ಕಾಲ ಆತ ಥಿಯೇಟರ್‌ನಲ್ಲಿ ಕೂರಲು ಸಾಧ್ಯವೇ ಇಲ್ಲ. ಒಟ್ಟಾರೆ ಅಂತಿಮವಾಗಿ ಒಂದು ಕಾಮಿಡಿ ಚಿತ್ರ ನೋಡಲು ಹೊರಟ ಪ್ರೇಕ್ಷಕನ ಪಾಲಿಗೆ ಅದು ಟ್ರಾಜೆಡಿಯಾಗುತ್ತದೆ, ಅಷ್ಟೆ.
ನಾಲ್ಕು ಮಂದಿ ತಮಾಷೆಯ ಹುಡುಗರು (ಶ್ರೇಯಸ್ ತಲ್ಪಡೆ, ಜಾವೇದ್ ಜೆಫ್ರಿ, ಆಶಿಶ್ ಚೌಧರಿ ಹಾಗೂ ವತ್ಸಲ್ ಸೇಥ್) ತಮಗಾಗಿ ಮನೆ ಹುಡುಕಲು ಆರಂಭಿಸುತ್ತಾರೆ. ಮನೆ ಹುಡುಕುವ ಹಂಗಾಮದಲ್ಲಿ ಅವರಿಗೆ ಪರಿಚಯವಾಗುವ ವ್ಯಕ್ತಿ ಬಲ್ಲು (ಜಾನಿ ಲಿವರ್). ಬಲ್ಲು ಅವರಿಗೆ ಮನೆ ಬಾಡಿಗೆಗೆ ನೀಡಲು ಒಪ್ಪಿದರೂ, ಆತ ಒಂದು ಶರತ್ತು ಹಾಕುತ್ತಾನೆ. ಶರತ್ತು ಏನೆಂದರೆ, ಬಾಡಿಗೆಗೆ ಬರುವವರು ಮದುವೆಯಾಗಿರಬೇಕು. ಹಾಗಾದರೆ ಹೆಂಡತಿಯರನ್ನು ಎಲ್ಲಿಂದ ತರುವುದು ಎಂಬ ಹೊಸ ಚಿಂತೆ ಶುರುವಾಗಿ, ಕೊನೆಗೆ ಹೆಂಡತಿಯ ವೇಷದಲ್ಲಿ ಯಾರು ಇರುವುದು ಎಂಬ ಪ್ರಶ್ನೆ ಎದುರಾಗುತ್ತದೆ.ಪೇಯಿಂಗ್ ಗೆಸ್ಟ್ಸ್‌ನ ಆರಂಭ ಸೊಗಸಾಗಿಯೇ ಇದ್ದರೂ, 30 ನಿಮಿಷಗಳಲ್ಲಿ ಅದರ ಪೆಟ್ರೋಲ್ ಮುಗಿದಂತೆ ಭಾಸವಾಗುತ್ತದೆ. ಅರ್ಥಾತ್, ಸಿನಿಮಾದ ಎಂಜಿನ್ ವೇಗ ಕಡಿಮೆಯಾಗುತ್ತದೆ. ಕುತೂಹಲ ಉಳಿಯದೆ ಬೋರ್ ಹೊಡೆಸುತ್ತದೆ. ಮೊದಲ 30 ನಿಮಿಷ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದರೂ, ಆಮೇಲೆ ನಗು ಕಡಿಮೆಯಾಗುತ್ತದೆ. ಕೊನೆಕೊನೆಯಲ್ಲಿ ಚಿತ್ರದ ಪಾತ್ರಗಳು ನಗುತ್ತಿದ್ದರೂ, ಪ್ರೇಕ್ಷಕರು ನಗುವುದಿಲ್ಲ.ಚಿತ್ರದಲ್ಲಿರುವ ನಾಲ್ವರು ಹುಡುಗರು ಹಾಗೂ ಜಾನಿ ಲಿವರ್ ಪಾತ್ರ ಸ್ವಲ್ಪವಾದರೂ ನಗು ತರಿಸಿದರೆ, ನಾಲ್ವರು ನಾಯಕಿಯರು (ಸೆಲಿನಾ ಜೇಟ್ಲಿ, ರಿಯಾ ಸೇನ್, ಸಯಾಲಿ ಭಗತ್, ನೇಹಾ ಧೂಪಿಯಾ) ವೇಸ್ಟ್. ಅವರ ಪಾತ್ರ ಪ್ರೇಕ್ಷಕನ ಮುಖದಲ್ಲಿ ಸಂತೋಷ ಹೆಚ್ಚಿಸುವಲ್ಲಿ ಯಾವುದೇ ಪಾತ್ರ ವಹಿಸುವುದಿಲ್ಲ. ಚಿತ್ರದ ಕ್ಲೈಮಾಕ್ಸ್ ಕೂಡಾ ಜಾನೇ ಭೀ ದೋ ಯಾರೋ ಚಿತ್ರದಿಂದ ನೇರವಾಗಿ ಎಗರಿಸಿದಂತೆ ಅನಿಸಿದರೆ ಅದರಲ್ಲಿ ಪ್ರೇಕ್ಷಕನ ತಪ್ಪಿಲ್ಲ.ನಿರ್ದೇಶಕ ಪರಿತೋಶ್ ಕೈಯಲ್ಲಿ ಒಂದು ಇಂಟರೆಸ್ಟಿಂಗ್ ಐಡಿಯಾ ಇತ್ತು ಎಂದು ಗೊತ್ತಾಗುತ್ತದಾದರೂ, ಸಂಭಾಷಣೆಯೇ ಚಿತ್ರಕ್ಕೆ ಮುಲುವಾಗಿದೆ. ಉತ್ತಮ ಸಂಭಾಷಣೆ ಬಂದಿದ್ದಲ್ಲಿ, ಚಿತ್ರ ಖಂಡಿತ ಮೇಲೆ ಬೀಳುತ್ತಿತ್ತು. ಇದು ಬಿಟ್ಟರೆ, ಚಿತ್ರದ ದೃಶ್ಯಗಳು, ತಾಂತ್ರಿಕ ಕೈಚಳಕ ಸೊಗಸಾಗಿವೆ. ಬ್ಯಾಂಕಾಕ್ ಹಾಗೂ ಪಟ್ಟಾಯಾ ದೃಶ್ಯಗಳು ಫ್ರೆಶ್ ಅನಿಸುತ್ತವೆ.ಉಳಿದಂತೆ, ನಟರ ಪೈಕಿ ಶ್ರೇಯಸ್ ತಲ್ಪಡೆ ಅಭಿನಯ ಇತರರಿಗಿಂತ ಬೆಸ್ಟ್ ಆಗಿ ಹೊರಹೊಮ್ಮಿದೆ. ನಂತರ ಸ್ಥಾನದಲ್ಲಿ ಜಾವೇದ್ ಜೆಫ್ರಿ, ಆಶಿಶ್ ಚೌಧರಿ, ವತ್ಸಲ್ ಸೇಥ್ ನಿಲ್ಲುತ್ತಾರೆ. ನಾಯಕಿಯರಿಗೆ ಇಲ್ಲಿ ಅಷ್ಟಾಗಿ ಕೆಲಸವೇನಿಲ್ಲದಿದ್ದರೂ, ಸೆಲಿನಾ ಹಾಗೂ ನೇಹಾ ಇದ್ದುದರಲ್ಲಿ ಗಮನ ಸೆಳೆಯುತ್ತಾರೆ. ರಿಯಾ ಸೇನ್ ಹಾಗೂ ಸಯಾಲಿಗೆ ಇಲ್ಲಿ ಅಷ್ಟೊಂದು ಮಹತ್ವ ಇಲ್ಲ. ಹತ್ತರಲ್ಲಿ ಹನ್ನೊಂದಾಗುತ್ತಾರೆ ಅಷ್ಟೆ. ಜಾನಿ ಲಿವರ್ ತಮ್ಮ ಎಂದಿನ ಫಾರ್ಮ್‌ನಲ್ಲೇ ಇದ್ದಾರೆ. ಒಟ್ಟಾರೆ ಪೇಯಿಂಗ್ ಗೆಸ್ಟ್ಸ್ ಚಿತ್ರಕ್ಕೆ ಪೇ ಮಾಡಿ ಥಿಯೇಟರ್ ಒಳಹೊಕ್ಕಿದ್ದು ವೇಸ್ಟ್ ಅಂತ ಅನಿಸಿದರೆ ಅದು ನಿಮ್ಮ ತಪ್ಪಲ್ಲ.