Select Your Language

Notifications

webdunia
webdunia
webdunia
webdunia

ದಶಾವತಾರಮ್

ದಶಾವತಾರಮ್
ಸತೀಶ್ ಪಾಗದ್
WD
ಯದಾ ಯದಾ ಹಿ ಧರ್ಮಸ್ಯಃ....ಭಗವದ್ ಗೀತೆಯ ಈ ಶ್ಲೋಕವನ್ನೇ ಆಧಾರವಾಗಿಟ್ಟುಕೊಂಡು ದಶಾವತಾರಮ್ ಕಥೆಯನ್ನು ಕಮಲ್ ಹಾಸನ್ ಹೆಣೆದಿದ್ದಾರೆಂಬುದಾಗಿ ಚಿತ್ರದ ಕ್ಲೈಮಾಕ್ಸ್ ನೋಡಿದ ನಂತರ ಅನ್ನಿಸದೇ ಇರದು. ತಮಿಳು ನಾಡಿನಲ್ಲಿ 12ನೇ ಶತಮಾನದ ಆದಿಯಲ್ಲಿ ನಡೆದ ಶೈವ-ವೈಷ್ಣವ ಮತ ಪಂಥಗಳ ನಡುವಿನ ಸಮಾಜದ ಆಂತರಿಕ ಕಲಹ, ಜೊತೆಗೆ ಶೈವ ಮತ ಪ್ರಚಾರದ ಭರದಲ್ಲಿ ಕಾಲ್ಪನಿಕವಾಗಿ ಅಥವಾ ನಿಜವಾಗಿಯೊ ಚೋಳ ರಾಜ ಮಾಡಿದ್ದ ಒಂದೇ ಒಂದು ಕೃತ್ಯದಿಂದ ಪ್ರಾರಂಭವಾಗುವ ಚಿತ್ರ, ಡಿಸೆಂಬರ್ 26, 2005ಕ್ಕೆ ಬಂದು ಅಂತ್ಯಗೊಳ್ಳುತ್ತದೆ. ಎಂಟು ಶತಮಾನಗಳ ಹಿಂದಿನ ಘಟನೆಯನ್ನು ಇಂದಿನ ಆಗು ಹೋಗುಗಳಿಗೆ ಹೋಲಿಕೆ ಮಾಡುತ್ತ ಒಂದಕ್ಕೊಂದು ತಾಗುವಂತೆ ಕಥೆಯನ್ನು ಹೆಣೆಯುತ್ತ ಹೋಗುವುದು ಅಷ್ಟು ಸುಲಭದ ಸಂಗತಿಯೂ ಅಲ್ಲ.

ವಾಸ್ತವಿಕವಾಗಿ ಮೊದಲ ಹತ್ತು ನಿಮಿಷದ ಅವಧಿಯಲ್ಲಿ ಪ್ರಸ್ತುತವಾಗುವ ಶೈವ-ವೈಷ್ಣವ ಸೈದ್ಧಾಂತಿಕ ಬಿಕ್ಕಟ್ಟು ಮತ್ತು ರಾಜಾಶ್ರಯ ಪಡೆದ ಧರ್ಮಾನುಯಾಯಿಗಳು ಅನುಸರಿಸುವ ಇಬ್ಬಗೆಯ ನೀತಿ ಹೊರತು ಪಡಿಸಿದರೆ, ನಂತರ ಅಂದರೆ ನೇರವಾಗಿ 2004ರಲ್ಲಿ ಗೋವಿಂದ (ಕಮಲ್ ಹಾಸನ್) ಎಂಬ ಜೀವ ವಿಜ್ಞಾನಿಯ ಸಂಶೋಧನೆಯೊಂದಿಗೆ ಚಿತ್ರ ಕಥೆ ಸಾಗುತ್ತದೆ. ಅಮೆರಿಕದ ಯಾವುದೋ ಒಂದು ಜೀವ ವಿಜ್ಞಾನ ಸಂಸ್ಥೆಯಲ್ಲಿ ವಿಜ್ಞಾನಿಯಾಗಿರುವ ಗೋವಿಂದ ಮತ್ತು ಆತನ ತಂಡವು ಜೈವಿಕ ಯುದ್ಧಕ್ಕೆ ಸಹಕಾರಿಯಾಗುವಂತಹ ವೈರಸ್‌ನ್ನು ಸಂಶೋಧನೆ ಮಾಡಿರುತ್ತಾರೆ. ಆಕಸ್ಮಿಕ ಅಚಾತುರ್ಯದಲ್ಲಿ ಪ್ರಯೋಗಕ್ಕೆ ಒಳಗಾಗಿದ್ದ ಮಂಗವು ವೈರಸ್‌ ಸಂಗ್ರಹಿಸಿಟ್ಟಿದ್ದ ವೈಲ್‌ನ್ನು ತಿಂದು ಭಯಾನಕ ಸಾವಿಗೆ ಒಳಗಾಗುತ್ತದೆ. ಕೋತಿಯ ದೇಹದಿಂದ ಹೊರಬರುವ ವೈರಸ್‌ಗಳು ಒಂದೇ ಕ್ಷಣದಲ್ಲಿ ಸಾವಿರಾರು ಜನರನ್ನು ಸಾವಿನ ಮನೆಗೆ ಕಳುಹಿಸಬಲ್ಲದು. ನಂತರ ದುಷ್ಟ ಶಕ್ತಿಗಳು ಈ ವೈಲ್ ಪಡೆಯುವುದಕ್ಕೆ ಸಂಚು ಹೂಡುತ್ತವೆ. ಈ ಸಂಚಿನಲ್ಲಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಸೇತು ಎಂಬುವವನು ಒಳಗೊಂಡಿರುತ್ತಾನೆ. ಆದರೂ ಗೋವಿಂದ ವೈಲ್‌ನ್ನು ಅಪಹರಿಸುವಲ್ಲಿ ಯಶಸ್ವಿಯಾಗುತ್ತಾನೆ. ಹೀಗೆ ತಿರುವು ಪಡೆಯುತ್ತ ಸಾಗುವ ಕಥೆ, ಸರಕು ಸಾಗಣೆ ವಿಮಾನದ ಮೂಲಕ ಭಾರತವನ್ನು ತಲುಪಿ, ಸುನಾಮಿಯಲ್ಲಿ ಅಂತ್ಯವಾಗುತ್ತದೆ.

ಇನ್ನೊಂದು ಅಂಶ ಎಂದರೆ ನಾಯಕಿ ಆಸೀನ್ ದೃಷ್ಟಿಯಲ್ಲಿ ಡಿಸೆಂಬರ್ 26, 2005ರಂದು ಬಂಗಾಳ ಕೊಲ್ಲಿಯಲ್ಲಿ ಸಂಭವಿಸಿದ ಸುನಾಮಿ ದೈವ ನಿಯಾಮಕ. ದುಷ್ಟ ಶಕ್ತಿಗಳ ಸಂಹಾರಕ್ಕೆ ವಿಷ್ಣು, (ನಾಯಕಿಯ ಬಾಯಲ್ಲಿ ಪೆರುಮಾಳ್) ಸುನಾಮಿ ಸೃಷ್ಟಿಸಿದ ಎಂಬ ಮಾತು ಕೊನೆಗೆ ಬರುತ್ತದೆ.

ಕಮಲ್ ಹಾಸನ್ ಅಭಿನಯದ ಬಗ್ಗೆ ಹೇಳುವುದಕ್ಕೆ ಏನೂ ಇಲ್ಲ. ಹತ್ತು ಪಾತ್ರಗಳಲ್ಲಿ ಅವರದು ವಿಶಿಷ್ಟ ಅಭಿನಯ ಮನಸ್ಸಿಗೆ ನಾಟುವುದಂತೂ ಖಂಡಿತ. ವೈಷ್ಣವ ಬ್ರಾಹ್ಮಣ, ವಿಜ್ಞಾನಿ, ಪೊಲೀಸ್ ಅಧಿಕಾರಿ ಬಲರಾಮ್ ನಾಯ್ಡು, ಆಳೆತ್ತರ ಎಡಬಿಡಂಗಿ ಆದರೆ ಮುಗ್ಧ ಮುಸಲ್ಮಾನ, ಜಪಾನಿ ಕುಂಗ್ ಫೂ ಪಟು, ಪಾಪ್ ಸಿಂಗರ್ ಅವತಾರ್ ಸಿಂಗ್, ಕೊನೆಗೆ ಜಾರ್ಜ್ ಬುಷ್ ಹೀಗೆ ನಿರ್ವಹಿಸಿದ ಹತ್ತೂ ಪಾತ್ರಗಳಲ್ಲಿ ಅವರ ಅಭಿನಯ ಅದ್ಭುತ. ಭಾರತೀಯ ಸಿನಿಮಾ ರಂಗದ ವಿಶಿಷ್ಟ ಕಲಾವಿದ ಕಮಲ್ ಎಂದರೇ ಅತಿಶಯೋಕ್ತಿಯಾಗಲಾರದು.

ದಶಾವತಾರಂನಲ್ಲಿ ಕಾಣುವ ಅಭಾಸ ಎಂದರೆ ಗಂಟಲು ಕ್ಯಾನ್ಸರಿಗೆ ತುತ್ತಾಗಿ ಸಾವಿನ ದವಡೆಯಲ್ಲಿ ಇದ್ದ ಅವತಾರ್ ಸಿಂಗ್ ಆಕಸ್ಮಿಕವಾಗಿ ಕಾದಾಟದಲ್ಲಿ ಗುಂಡೇಟಿಗೀಡಾಗುತ್ತಾನೆ. ಅದೃಷ್ಟ ಎಂದರೆ ಹೃದಯದ ಬಲಭಾಗಕ್ಕೆ ಗುಂಡು ತಾಗುತ್ತದೆ. ಹೀಗಾಗಿ ಸೂಕ್ತ ಚಿಕಿತ್ಸೆಯ ನಂತರ ಬದುಕಿ ಉಳಿಯುತ್ತಾನೆ. ಈ ಸಂದರ್ಭದಲ್ಲಿ ಡಾಕ್ಟರ್ ಗುಂಡಿನ ಏಟಿಗೆ ಕ್ಯಾನ್ಸರ್ ಗಂಟು ಸಂಪೂರ್ಣವಾಗಿ ಸುಟ್ಟು ಹೋಗಿದೆ, ನೀನಿಗ ಗುಣಮುಖ ಇನ್ನಾರು ತಿಂಗಳು ನಂತರ ಮತ್ತೆ ಹಾಡಬಹುದು ಎಂದು ಹೇಳುತ್ತಾರೆ. ಎಂತಹ ವಿಚಿತ್ರ! ವಿಜ್ಞಾನವನ್ನೇ ಚಿತ್ರದಲ್ಲಿ ಆಧಾರವಾಗಿ ಇಟ್ಟುಕೊಂಡರೂ ಇಂತಹದೊಂದು ವಿಚಿತ್ರ ಅಭಾಸ. ಶ್ವೇತ ಶುಭ್ರ ಬಟ್ಟೆಯಲ್ಲಿ ಕಪ್ಪು ಚುಕ್ಕೆಯಂತೆ.

Share this Story:

Follow Webdunia kannada