Select Your Language

Notifications

webdunia
webdunia
webdunia
webdunia

ಚಿತ್ರ ವಿಮರ್ಶೆ: ಹೊಸತನವಿಲ್ಲದ ಮನರಂಜನೆಯ ಭದ್ರ'ಕೋಟೆ'

ಚಿತ್ರ ವಿಮರ್ಶೆ: ಹೊಸತನವಿಲ್ಲದ ಮನರಂಜನೆಯ ಭದ್ರ'ಕೋಟೆ'
NRB
ಪಕ್ಕಾ ಕಮರ್ಶಿಯಲ್ ಚಿತ್ರವೊಂದಕ್ಕೆ ಬೇಕಾದ ಎಲ್ಲಾ ಸರಕು ಸರಂಜಾಮುಗಳನ್ನು ಹೊತ್ತು ಬಂದಿರುವ ಚಿತ್ರ 'ಕೋಟೆ' ಯಲ್ಲಿ ಹೊಸತೇನಿಲ್ಲ. ಎಲ್ಲವೂ ಹಳೆಯದೇ. ಆದರೂ ಪ್ರೇಕ್ಷಕನಿಗೆ ಯಾವುದೇ ಮೋಸವಿಲ್ಲ. ಅಷ್ಟರ ಮಟ್ಟಿಗೆ ಫ್ರೆಶ್ ಎನಿಸುವ ರೀತಿಯಲ್ಲಿ 'ಕೋಟೆ'ಯನ್ನು ನಿರ್ದೇಶಕ ಶ್ರೀನಿವಾಸ ರಾಜು ನಿರ್ಮಿಸಿದ್ದಾರೆ.

ಪ್ರಥಮಾರ್ಧ ಸುಮ್ಮನೆ ನೋಡಿಸಿಕೊಂಡು ಹಾಗೂ ದ್ವಿತೀಯಾರ್ಧ ಹೊಡೆದಾಡಿಸಿಕೊಂಡು ಸಾಗುವ ಈ ಚಿತ್ರ ಎಲ್ಲೂ ಬೋರ್ ಹೊಡೆಸುವುದಿಲ್ಲ ಎನ್ನುವುದೇ ಸಮಾಧಾನಕರ ಸಂಗತಿ.

ಚಿತ್ರದ ಹೀರೋ ಪ್ರಜ್ವಲ್ ದೇವರಾಜ್‌ಗಿಂತ ಮಿಗಿಲಾಗಿ ವಿಲನ್ ರವಿಶಂಕರ್ ಕುರಿತು ಹೇಳದೆ 'ಕೋಟೆ' ಬಗ್ಗೆ ಹೇಳಿದರೆ ತಪ್ಪಾದೀತು. ಚಿತ್ರದ ಹೈಲೈಟೇ ರವಿಶಂಕರ್. ಈ ಖಳನಾಯಕನ ಅವತಾರಗಳನ್ನು ಕಣ್ಣು ಮಿಟುಕಿಸದೆ ಕಾತುರದಿಂದ ವೀಕ್ಷಿಸಬೇಕು ಅಂತ ಪ್ರೇಕ್ಷಕನಿಗೆ ಅನಿಸಿದರೆ ಆಶ್ಚರ್ಯವಿಲ್ಲ.

ಅಷ್ಟರ ಮಟ್ಟಿಗೆ ಇಡೀ ಸಿನಿಮಾವನ್ನು ಆವರಿಸಿಕೊಂಡು ಬಿಡುತ್ತಾರೆ ರವಿಶಂಕರ್. ಅವರೆದುರು ನಾಯಕ ಪ್ರಜ್ವಲ್ ಮಂಕೆನಿಸಿದರೂ ಪ್ರಜ್ವಲ್ ಸಾಕಷ್ಟು ಪಳಗಿದ್ದಾರೆ. ಸಂಭಾಷಣೆ ಒಪ್ಪಿಸುವ ಶೈಲಿಯಿಂದ ಹಿಡಿದು ಹೊಡೆದಾಟ, ಬಡಿದಾಟ, ತುಂಟಾಟ ಎಲ್ಲದರಲ್ಲೂ ಚೆನ್ನಾಗಿ ಅಭಿನಯಿಸಿದ್ದಾರೆ.

ಕನ್ನಡದಲ್ಲಿ ಚರ್ವಿತ ಚರ್ವಣವಾಗಿರುವ ಬಿಸಿರಕ್ತದ ಹುಡುಗನೇ ಮುಂದೆ ಪೊಲೀಸ್ ಅಧಿಕಾರಿಯಾಗಿ ಖಳರನ್ನು ಸಾಲು ಸಾಲಾಗಿ ಗುಂಡು ಹೊಡೆದು ಮಟ್ಟ ಹಾಕುವ ಕಥೆಯುಳ್ಳ ಚಿತ್ರವಿದು. ಚಿತ್ರದ ಆಗು-ಹೋಗುಗಳು ಹುಬ್ಬಳ್ಳಿಯಲ್ಲಿ ನಡೆಯುವುದರಿಂದ ಅಲ್ಲಿನ ಭಾಷೆಯ ಬಳಕೆಯೂ ಮುಖ್ಯ. ಈ ನಿಟ್ಟಿನಲ್ಲಿ ಸಂಭಾಷಣೆಕಾರ ಗುರುರಾಜ ದೇಸಾಯಿ ಗೆದ್ದಿದ್ದಾರೆ.

ನಾಯಕ ಪ್ರಧಾನ ಚಿತ್ರವಾಗಿರುವುದರಿಂದ ನಾಯಕಿಯರಾದ ಡಿಂಪಲ್ ಛೋಪ್ರಾ, ಗಾಯತ್ರಿ ರಾವ್ ಅವರಿಗೆ ಹೆಚ್ಚಿಗೆ ಕೆಲಸವಿಲ್ಲ. ಅಂದದ ನಾಯಕಿ ಡಿಂಪಲ್ ಒಂದು ಹಾಡಿನಲ್ಲಂತೂ ಪಡ್ಡೆಗಳ ನಿದ್ದೆಗೆಡಿಸುತ್ತಾರೆ.

ರಘು ದೀಕ್ಷಿತ್ ಕಮರ್ಷಿಯಲ್ ಚಿತ್ರಕ್ಕೂ ಸಂಗೀತ ನೀಡಬಲ್ಲೆನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಕೆ.ದತ್ತು ಅವರ ಛಾಯಾಗ್ರಹಣ ಸೇರಿದಂತೆ ತಾಂತ್ರಿಕ ವರ್ಗದ ಕೆಲಸ ಅಚ್ಚುಕಟ್ಟಾಗಿ ಮೂಡಿಬಂದಿದೆ.

Share this Story:

Follow Webdunia kannada