Select Your Language

Notifications

webdunia
webdunia
webdunia
webdunia

ಕಥೆ ಚಿಂತೆ ಬಿಟ್ಟು ಸಿನಿಮಾ ನೋಡಿದರೆ 'ಬ್ಲೂ' ಅದ್ಭುತ!

ಕಥೆ ಚಿಂತೆ ಬಿಟ್ಟು ಸಿನಿಮಾ ನೋಡಿದರೆ 'ಬ್ಲೂ' ಅದ್ಭುತ!
IFM
ಬಹುನಿರೀಕ್ಷೆಯ, ಭಾರೀ ವೆಚ್ಚದ ಬ್ಲೂ ಚಿತ್ರ ಹೊರಬಂದಿದೆ. ಹೊರಬರುವ ಜತೆಗೆ ನಿರೀಕ್ಷೆಯ ಆಶಾಗೋಪುರವೂ ಕಳಚಿ ಬಿದ್ದಿದೆ. ಚಿತ್ರವನ್ನು ಒಮ್ಮೆ ನೋಡಿದರೂ ಸಾಕು, ಚಿತ್ರದ ನಿಜವಾದ ವಿಲನ್ ಅಕ್ಷಯ್ ಕುಮಾರ್ ಅಲ್ಲ, ಅದು ಚಿತ್ರಕಥೆ ಎಂಬುದು ಅರಿವಾಗುತ್ತದೆ!

ಕಥೆಯ ಮೂಲ ಹುಡುಕಿದರೆ, ಕೊಂಚ ಎನಿಡ್ ಬ್ಲಿಂಟನ್‌ನ 'ದಿ ಫೇಮಸ್ ಫೈವ್' ಕಥೆಯ ಥರ ಕಾಣಿಸುತ್ತದೆ. ಆದರೆ ಚಿತ್ರಕಥೆ ಕುಟ್ಟುವಾಗ ಬರಹಗಾರ ಬಹಾಮಾದ ಆಳಗಳಲ್ಲಿ ಚೆಂದನೆಯ ದೇಹವಿರುವ ನಾಯಕ, ನಾಯಕಿಯರನ್ನು ಬೇರೆ ಬೇರೆ ಭಂಗಿಗಳಲ್ಲಿ ತೋರಿಸಲಾಗುತ್ತದೆ ಎಂಬ ಅಂಶವನ್ನೇ ಹೆಚ್ಚು ತಲೆಗೆ ತೆಗೆದುಕೊಂಡಿದ್ದಾರೆ ಎನಿಸುತ್ತದೆ. ಹಾಗಾಗಿ ಚಿತ್ರದಲ್ಲಿ ಕಥೆಯೇ ಗೌಣವಾಗಿದೆ.

ಸಂಜಯ್ ದತ್ ಹಾಗೂ ಅಕ್ಷಯ್ ಕುಮಾರ್ ಇಬ್ಬರೂ ಗೆಳೆಯರು. ಅವರಿಬ್ಬರೂ ಮೀನುಗಾರಿಕಾ ಉದ್ಯಮದಲ್ಲಿರುವವರು ಎಂದು ಪ್ರೇಕ್ಷಕರೇ ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ, ಚಿತ್ರದಲ್ಲಿ ಒಮ್ಮೆಯೂ ಅವರು ಕಚೇರಿಯ ಕೆಲಸಮಾಡುವುದನ್ನು ತೋರಿಸುವುದಿಲ್ಲ! ದಿನವಿಡೀ ಸಾಗರದಾಳದಲ್ಲಿ ಮುಳುಗೇಳುವುದು ಬಿಟ್ಟರೆ ಅವರಿಗೆ ಕೆಲಸವೇ ಇಲ್ಲವೆಂದೆನಿಸುತ್ತದೆ.
webdunia
IFM


ಹೀಗಿದ್ದರೂ, ಚಿತ್ರಕ್ಕೆ ಹೊಂದಿಕೊಂಡಿರುವಂಥ ಪ್ರಮುಖ ಪಾತ್ರವಾಗಿ ಕಂಗೊಳಿಸುವುದು ಝಯೇದ್ ಖಾನ್ ಪಾತ್ರ. ಬ್ಯಾಂಕಾಕಿನಲ್ಲಿ ತುಂಟ ರೇಸಿಂಗ್ ಮಾಡುತ್ತಾ ಕತ್ರಿನಾ ಕೈಫ್‌ಳ ಹಿಂದೆ ಮುಂದೆ ಸುತ್ತುವ ದೃಶ್ಯಗಳು ತಮಾಷೆಯಾಗಿ ಚೆನ್ನಾಗಿವೆ. ಹಿಂದಿ ಸಿನಿಮಾದಲ್ಲೇ ಈವರೆಗೆ ನೋಡದೆ ಇದ್ದಂತಹ ಬಹು ಉದ್ದದ ಛೇಸಿಂಗ್ ದೃಶ್ಯಗಳೂ ಕೂಡಾ ಸಾಹಸಪ್ರಿಯರ ಮೈನವಿರೇಳಿಸುತ್ತದೆ. ನೀಲಿ ನೀಲಿ ಸಾಗರದಾಳ, ಮುಳುಗೇಳುವ ನಾಯಕ ನಾಯಕಿಯರ ಬಾಯಿಂದ ಹೊರಬರುವ ಗುಳ್ಳೆಗಳು, ಉಸಿರು ಬಿಗಿಹಿಡಿಸುವ ಸ್ಟಂಟ್ ದೃಶ್ಯಗಳು ರೋಮಾಂಚಕಾರಿಯೆನಿಸುತ್ತದೆ.

ಆದರೆ ಇವಿಷ್ಟನ್ನು ಹೊರತು ಪಡಿಸಿದರೆ, ಚಿತ್ರದಲ್ಲಿ ಅಂತಹ ಕಥೆ ಯಾವುದೆಂದು ಗೋಚರಿಸುವುದೇ ಇಲ್ಲ. ನಿರ್ದೇಶಕ ಆಂಟೊನಿ ಡಿಸೋಜಾ ತಮ್ಮ ಸಂಪೂರ್ಣ ಹಿಡಿತವನ್ನು ಹೊರಜಗತ್ತಿನ ಪಾತ್ರಗಳ ಮೇಲೆ ಹೊಂದಿರುವುದು ಗೊತ್ತಾಗುತ್ತದೆ. ಆದರೆ ನೀರಿನಾಳಕ್ಕೆ ಇಳಿದ ಪಾತ್ರಗಳ ಹಿಡಿತ ಅವರ ಕೈತಪ್ಪಿದೆ. ಆದರೂ ಕಥೆಯನ್ನು ಹೊರತು ಪಡಿಸಿ ನೋಡಿದರೆ ಬ್ಲೂ ಚಿತ್ರ ಚೆನ್ನಾಗಿಯೇ ಇದೆ. ಚಿತ್ರಕಥೆಯೇ ಚಿತ್ರದ ಪ್ರಮುಖ ವೀಕ್‌ನೆಸ್. ಅದು ಬಿಟ್ಟರೆ ಚಿತ್ರದ ಪ್ರತಿಯೊಂದು ದೃಶ್ಯವೂ ಹಿಂದಿ ಸಿನಿಮಾ ಇತಿಹಾಸದಲ್ಲಿ ಭಾಷ್ಯ ಬರೆಯುತ್ತವೆ.
webdunia
IFM


ಲಾರಾ ದತ್ತ ತಮ್ಮ ಬಿಕಿನಿಯಲ್ಲಿ ಕಡೆದಿಟ್ಟ ಶಿಲ್ಪದಂತೆ ಕಂಗೊಳಿಸಿದ್ದಾರೆ. ಆಕೆಯ ಮೈಸಿರಿಯನ್ನು ನೋಡಲು ಕಣ್ಣೆರಡು ಸಾಲದು ಎಂಬಷ್ಟು ಮಿಂಚಿದ್ದಾರೆ. ಅಭಿನಯಕ್ಕೆ ಆಕೆ ಅಂತಹ ಮಹತ್ವ ಕೊಡದಿದ್ದರೂ, ಚಿತ್ರವಿಡೀ ತನ್ನ ದಿವ್ಯ ದರ್ಶನದಿಂದಲೇ ಪುಳಕ ಹುಟ್ಟಿಸುತ್ತಾರೆ. ಸಂಜಯ್ ದತ್ 20 ಕಿಲೋ ತೂಕ ಇಳಿಸಿಕೊಂಡೇ ಆಳವಾದ ನೀರಿಗಿಳಿದಿದ್ದಾರೆ. ಸಂಜಯ್ ದತ್ ಆಕೆಯ ಜತೆಗೆ ಜೋಡಿಯಾಗಿ ಕಂಗೊಳಿಸಿದರೂ, ಅಪ್ಪ ಮಗಳ ಜೋಡಿಯಂತೆ ಕಾಣುತ್ತದೆ ಎಂದೂ ಧಾರಾಳವಾಗಿ ಟೀಕಿಸಬಹುದು.

ಅಕ್ಷಯ್ ಕುಮಾರ್ ಅಂತೂ ಕೊನೆಯಲ್ಲಿ ತನ್ನ ಮೊ-ಬೈಕ್ ಹಿಡಿದು ನೀರಿಗಿಳಿಯುವುದನ್ನು ನೋಡಿದರೆ, ಅವರು ನೀರು ಹಾಗೂ ನೆಲದ ವ್ಯತ್ಯಾಸವನ್ನು ಹೆಚ್ಚು ಅರಿತಿಲ್ಲವೇನೋ ಎಂಬ ಪ್ರಶ್ನೆ ಕಾಡುತ್ತದೆ. ನೆಲದಲ್ಲೇ ಓಡಿಸುವಷ್ಟು ಸುಲಭವಾಗಿ ನೀರಿಗಿಳಿದುಬಿಡುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ಕಥೆಯೇ ಇಲ್ಲದೆ ಸಾಗರದ ಗರ್ಭಕ್ಕೆ ಪಯಣ ಹೊರಟಂತಿದೆ ಸಿನಿಮಾ. ಹಿಂದಿ ಸಿನಿಮಾದಲ್ಲಿ ಸಾಗರದಾಳದ ರೋಮಾಂಚಕ ಸ್ಟಂಟ್‌ಗಳನ್ನು, ನೀರಿನಡಿಯ ರೋಚಕತೆಯನ್ನು ಮಾತ್ರ ಕಣ್ತುಂಬಿಕೊಳ್ಳಬಯಸುವವರು ಧಾರಾಳವಾಗಿ ನೋಡಬಹುದು. ಅದು ಬಿಟ್ಟರೆ ನೋಡಲು ಕಥೆ ಎಂಬುದು ಅಂಥಾದ್ದೇನಿಲ್ಲ.

Share this Story:

Follow Webdunia kannada