Select Your Language

Notifications

webdunia
webdunia
webdunia
webdunia

ಅದ್ಭುತ ನಟನೆಯ ಭರ್ಜರಿ ಚಿತ್ರ - ಜೋಧಾ ಅಕ್ಬರ್

ಅದ್ಭುತ ನಟನೆಯ ಭರ್ಜರಿ ಚಿತ್ರ - ಜೋಧಾ ಅಕ್ಬರ್
IFM
ಕುತೂಹಲ ಮೂಡಿಸಿದ್ದ ಜೋಧಾ ಅಕ್ಬರ್ ಬಿಡುಗಡೆ ಕಂಡಿದೆ. ಇಂಥದ್ದೊಂದು ಚಿತ್ರ ನಿರ್ಮಿಸಬೇಕಿದ್ದರೆ, ಧೈರ್ಯ ಬೇಕು, ತಾಳ್ಮೆ ಬೇಕು, ಪ್ರತಿಭೆ ಬೇಕು, ಜ್ಞಾನ ಬೇಕು... ಮತ್ತು ಅಫ್-ಕೋರ್ಸ್... ಭಾರಿ ಪ್ರಮಾಣದ ಹಣವೂ ಬೇಕೇ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ಐತಿಹಾಸಿಕ ಕಥಾನಕವೊಂದನ್ನು ಪರದೆ ಮೇಲೆ ಬಿಂಬಿಸುವ ಕೈಚಳಕ ಬೇಕು.

ಯಾಕೆಂದರೆ ಐತಿಹಾಸಿಕ ಕಥಾನಕಕ್ಕೆ ಚಿತ್ರೋದ್ಯಮ ಕ್ಷೇತ್ರದಲ್ಲಿ ಅಷ್ಟೇನೂ ಮನ್ನಣೆ ಇಲ್ಲ. 40 ಕೋಟಿ ರೂಪಾಯಿಯಷ್ಟು ಹಣ ಹಾಕಿದಲ್ಲಿ ಅದು ಯಾವ ಕಡೆ ಬೇಕಾದರೂ ವಾಲಬಹುದಾಗಿದೆಯಲ್ಲ....

ಜೋಧಾ ಅಕ್ಬರ್ ಚಿತ್ರ ನೋಡಿದಲ್ಲಿ ಇದೊಂದು ಅದ್ಭುತ ಮನರಂಜನೆ ಎಂದು ಹೇಳಲಡ್ಡಿಯಿಲ್ಲ. ಇದು ಮುಘಲ್ ಎ ಅಜಾಮ್‌ನಂತೆ ಸಲೀಂ ಮತ್ತು ಅನಾರ್ಕಲಿಯ ಪ್ರೇಮ ಪ್ರಕರಣವೊಂದಕ್ಕೇ ಸೀಮಿತವಾದ ಚಿತ್ರವಲ್ಲ ಎಂಬುದನ್ನು ಗಮನಿಸಬೇಕು. ಇದು ಅಕ್ಬರ್ ಮತ್ತು ಜೋಧಾ ನಡುವಣ ಕಥಾನಕ. ಚಿತ್ರವು ಬಹಳ ಉದ್ದವಿದೆ (3.20 ಗಂಟೆ) ಎಂಬ ಆರೋಪವಿದ್ದರೂ, ಚಿತ್ರ ನೋಡಿದರೆ, ಸಮಯ ಕಳೆಯುವುದೇ ಗೊತ್ತಾಗುತ್ತಿಲ್ಲ.

ಅಶುತೋಷ್ ಗೊವಾರಿಕರ್ ಅವರು ಅತ್ಯುತ್ತಮ ಚಿತ್ರವೊಂದನ್ನು ನೀಡಿದ್ದಾರೆ. ಈ ಐತಿಹಾಸಿಕ ಕಥಾನಕ ವಿಭಾಗದ ಚಿತ್ರಗಳಲ್ಲೇ ಐಶ್ವರ್ಯಾ ರೈ, ಹೃತಿಕ್ ರೋಶನ್ ನಟನೆಯ ಜೋಧಾ ಅಕ್ಬರ್ ಚಿತ್ರವು ಮೇರು ಸ್ಥಾನದಲ್ಲಿ ನಿಲ್ಲುತ್ತದೆ ಎನ್ನಬಹುದು.

16ನೇ ಶತಮಾನದ ಹಿಂದಕ್ಕೆ ನಮ್ಮನ್ನು ಕರೆದೊಯ್ಯುವ ಚಿತ್ರವು ಪ್ರೇಮ ಕಥೆಯ ಸುತ್ತವೇ ಸುತ್ತುತ್ತದೆ. ಶ್ರೇಷ್ಠ ಮೊಘಲ್ ಚಕ್ರವರ್ತಿ ಅಕ್ಬರ್ ಹಾಗೂ ರಜಪೂತರ ರಾಜಕುಮಾರಿ ಜೋಧಾ ನಡುವಣ ಸಂಬಂಧದ ಕಥಾನಕವಿದು. ಜೋಧಾ (ಐಶ್ವರ್ಯಾ ರೈ ಬಚ್ಚನ್)ಳನ್ನು ಮದುವೆಯಾದ ಬಳಿಕ ನೈಜ ಪ್ರೇಮಯಾನದಲ್ಲಿ ತೇಲುತ್ತೇನೆಂದು ಅಕ್ಬರ್ (ಹೃತಿಕ್) ಬಹುಶಃ ಎಣಿಸಿರಲಿಲ್ಲ.

ಅಮೇರ್‌ನ ದೊರೆ ಭರ್ಮಾಲ್ ಪುತ್ರಿಯಾಗಿರುವ ಜೋಧಾ, ಈ ಮೈತ್ರಿಯ ಮದುವೆಯಲ್ಲಿ ಕೇವಲ ರಾಜಕೀಯ ದಾಳವಾಗುತ್ತಾಳೆ ಮತ್ತು ಒಲ್ಲದ ಮದುವೆಯಿಂದ ತತ್ತರಿಸುತ್ತಾಳೆ. ಅಕ್ಬರನ ದೊಡ್ಡ ತಲೆನೋವೆಂದರೆ ಯುದ್ಧಗಳನ್ನು ಗೆಲ್ಲುವುದಲ್ಲ, ಬದಲಾಗಿ ಈ ಒಲ್ಲದ ಹೆಣ್ಣಿನ ಮನಸ್ಸು ಗೆಲ್ಲುವುದು. ಜೋಧಾ ಅಕ್ಬರ್ ಗೆದ್ದದ್ದು ಎಲ್ಲಿ ಅಂದ್ರೆ, ಇಂದಿನವರಿಗೆ ಜೋಧಾ ಮತ್ತು ಅಕ್ಬರ್ ನಡುವಣ ಪ್ರೇಮ ಕಥೆಯ ಅರಿವಿಲ್ಲ.

ಈ ಚಿತ್ರದಲ್ಲಿ ಗಮನ ಸೆಳೆಯೋದೇನೆಂದ್ರೆ, ಆರಂಭದಲ್ಲೇ ಯುದ್ಧದ ದೃಶ್ಯ. ಚಿತ್ರ ಎಷ್ಟು ಅದ್ದೂರಿಯಾಗಿದೆ ಎಂಬುದಕ್ಕೆ ಇದು ಮುನ್ನುಡಿ ಬರೆಯುತ್ತದೆ. ಇದರ ನಡುವೆ, ಮದವೇರಿದ ಆನೆಯನ್ನು ಹೃತಿಕ್ ಪಳಗಿಸೋದು, ಅಕ್ಬರ್‌ನನ್ನು ವಿವಾಹವಾಗುವ ಮುನ್ನ ಜೋಧಾ ಒಡ್ಡುವ ಪೂರ್ವ ಶರತ್ತುಗಳು, ಹೃತಿಕ್ ಮತ್ತು ಐಶ್ ನಡುವಣ ಕತ್ತಿ ಕಾಳಗ, ಕ್ಲೈಮಾಕ್ಸ್‌ನಲ್ಲಿ ಬರುವ ಕಾಳಗದ ದೃಶ್ಯ... ಇವೆಲ್ಲಾ ಅಚ್ಚಳಿಯದೆ ನಿಲ್ಲುತ್ತವೆ.

ಐತಿಹಾಸಿಕ ಕಥೆಯೊಂದನ್ನು ಪರದೆ ಮೇಲೆ ಜನರಿಗೆ ಬೋರ್ ಇಲ್ಲದಂತೆ ತರುವ ಅಶುತೋಶ್ ಗೊವಾರಿಕರ್ ಅವರ ನಿರ್ದೇಶನ ಕಲೆ ಮೆಚ್ಚಬೇಕಾದ್ದು. ಎ.ಆರ್.ರೆಹಮಾನ್ ಅವರ ಸಂಗೀತ ಉತ್ತಮ ಸಾಥ್ ನೀಡುತ್ತದೆ. ಹೈದರ್ ಅಲಿ ಮತ್ತು ಗೊವಾರಿಕರ್ ಅವರು ಚಿತ್ರಕಥೆಯನ್ನು ಚೆನ್ನಾಗಿಯೇ ಹೆಣೆದಿದ್ದಾರೆ. ಅಲ್ಲಿರುವ ಜಾತ್ಯತೀತತೆ ಕುರಿತ ಅಂಶಗಳು ಸಕಾಲಿಕ ಎನಿಸುತ್ತವೆ.

ಕೆ.ಪಿ.ಸಕ್ಸೇನಾ ಅವರ ಸಂಭಾಷಣೆಯಂತೂ ಕ್ಲಾಸ್ ಆಗಿ ಮೂಡಿಬಂದಿದ್ದರೆ, ಕಿರಣ್ ದೇವಹಂಸ ಅವರ ಸಿನೆಮಾಟೋಗ್ರಫಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಲಿಕೆಯಾಗುತ್ತದೆ. ಯುದ್ಧದ ಕವರೇಜ್ ಅದ್ಭುತ.

ಪಾತ್ರಗಳ ಆಯ್ಕೆಯೂ ಚೆನ್ನಾಗಿದೆ ಎನ್ನಬಹುದು. ಅಕ್ಬರ್ ಪಾತ್ರಕ್ಕೆ ಹೃತಿಕ್ಕೇ ಸೂಕ್ತ ಎಂಬುದನ್ನು ತಮ್ಮ ನಟನಾ ಚಾತುರ್ಯದಿಂದ ತೋರಿಸಿಕೊಟ್ಟಿದ್ದಾರೆ. ಐಶ್ವರ್ಯಾ ರೈ ಬಗೆಗೂ ಎರಡು ಮಾತಿಲ್ಲ. ಅವರಿಂದ ಉತ್ತಮವಾದ ಭಾವನಾತ್ಮಕ ಪಾತ್ರವೊಂದನ್ನು ಹೊರಗೆಳೆದಿದ್ದಾರೆ ನಿರ್ದೇಶಕರು.

ಐಶ್, ಹೃತಿಕ್ ಅವರೊಂದಿಗೆ ಇಳಾ ಅರುಣ್, ನಿಕಿತಿನ್ ಧೀರ್, ಸೋನು ಸೂದ್, ಪೂನಮ್ ಸಿನ್ಹಾ, ಕುಲಭೂಷಣ್, ರಾಜಾ ಮುರಾದ್, ರಾಜೇಶ್ ವಿವೇಕ್ ಅವರ ನಟನೆಯೂ ಗಮನ ಸೆಳೆಯುತ್ತದೆ.

ಒಟ್ಟಿನಲ್ಲಿ ಜೋಧಾ ಅಕ್ಬರ್ ಎಲ್ಲಾ ವಿಧದಲ್ಲೂ ಶ್ಲಾಘನಾರ್ಹ ಚಿತ್ರ. ಇದು 2008ರ ಬ್ಲಾಕ್ ಬಸ್ಟರ್ ಚಿತ್ರವಾಗುವ ಎಲ್ಲ ಲಕ್ಷಣಗಳಿವೆ.

Share this Story:

Follow Webdunia kannada