Select Your Language

Notifications

webdunia
webdunia
webdunia
webdunia

'13ಬಿ' ಎಂಬ ಅದ್ಭುತ ಥ್ರಿಲ್ಲರ್ ಕಥಾನಕ

'13ಬಿ' ಎಂಬ ಅದ್ಭುತ ಥ್ರಿಲ್ಲರ್ ಕಥಾನಕ
IFM
`13ಬಿ' ನಗರವೊಂದರಲ್ಲಿರುವ ಫ್ಲಾಟ್ ಅಡ್ರಸ್ ಈ ಸಿನಿಮಾದ ಹೆಸರು. ಮುಗ್ಧ- ಮುದ್ದು ಮೊಗದ ಸುರಸುಂದರಾಂಗ ಮಾಧವನ್ ಈ ಚಿತ್ರದ ನಾಯಕ. ಪಾಟ್ನಾದ ಬೆಡಗಿ ನೀತು ಚಂದ್ರ ಈ ಚಿತ್ರದ ನಾಯಕಿ.

ಮನೋಹರ್ (ಮಾಧವನ್) ಹಾಗೂ ಅವನ ಹೆಂಡತಿ (ನೀತು ಚಂದ್ರ) ಹೊಸಮನೆಗೆ ಸ್ಥಳಾಂತರಗೊಳ್ಳುವುದರಿಂದ ಕಥೆ ಆರಂಭವಾಗುತ್ತದೆ. ಆ ಹೊಸ ಮನೆಯ ಅಡ್ರಸ್ ಫ್ಲಾಟ್ ನಂ 13ಬಿ. ಮನೋಹರನದ್ದು ತುಂಬು ಸಂಸಾರ. ಮನೋಹರ್‌ನ ಅಣ್ಣ, ಅಣ್ಣನ ಹೆಂಡತಿ, ಅವರ ಇಬ್ಬರು ಮಕ್ಕಳು, ತಾಯಿ ಹಾಗೂ ಕಾಲೇಜಿಗೆ ಹೋಗುತ್ತಿರುವ ಮನೋಹರನ ತಂಗಿ ಇಷ್ಟು ಜನರಿರುವ ಅವರ ಸಂಸಾರ ಸಂತಸದ ಸಾಗರ. ಮನೆಯ ಎಲ್ಲ ಮಹಿಳೆಯರೂ ಪ್ರತಿದಿನ ಸಾಸ್ ಬಹು ದಾರಾವಾಹಿಯನ್ನು ಬಿಡದೆ ನೋಡುತ್ತಿದ್ದರು.
ಈ ಹೊಸ ಮನೆಗೆ ಬಂದ ಮೇಲೆ ಮನೋಹರನಿಗೆ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಆ ಹೊಸ ಮನೆಗೆ ಪ್ರತಿ ಬಾರಿಯೂ ಅವನೊಬ್ಬನೇ ಬರಬೇಕಾದರೆ ಯಾವಾಗಲೂ ಲಿಫ್ಟ್ ವರ್ಕಾಗದಿರುವುದು, ಅವನ ಮೊಬೈಲ್ ಅವನದೇ ವಿರೂಪಗೊಂಡಿರುವ ಫೋಟೋಗಳನ್ನು ಕ್ಲಿಕ್ಕಿಸುವುದು, ಆಫ್ ಮಾಡಿದರೂ ಅವನ ಬಾತ್‌ರೂಂ ಬಲ್ಬ್ ಆಗಾಗ ಆನ್ ಆಗುವುದು, ಮನೆಯ ಗೋಡೆಗೆ ಒಂದೇ ಒಂದು ಮೊಳೆ ಹೊಡೆಯಲು ಆಗದಿರುವುದು ಮತ್ತಿತರ ಘಟನೆಗಳು ಮನೋಹರನಿಗೆ ಆಗಾಗ ಆ ಮನೆಯಲ್ಲಿ ಸಾಮಾನ್ಯವಾಗಿದ್ದವು. ಮತ್ತು ಇದೆಲ್ಲವೂ ಅವನಿಗೊಬ್ಬನಿಗೇ ಅನುಭವವಾಗುತ್ತಿದ್ದುದು ವಿಶೇಷ. ಇಂತಹ ವಿಚಿತ್ರ ಘಟನೆಗಳು ನಡೆಯುತ್ತಿರುವಾಗಲೇ ಅವನ ಸಂಸಾರದ ಇತರರಿಗೆ ವಿರುದ್ಧವಾದ ಘಟನೆಗಳು ನಡೆಯುತ್ತಿದ್ದವು.

ಸಂಸಾರ ಹೀಗೇ ಸಾಗುತ್ತಿರುವಾಗ ಆ ಮನೆಯ ಮಹಿಳಾಮಣಿಗಳು ಸಬ್ ಖೈರಿಯತ್ ಎಂಬ ಇನ್ನೊಂದು ಹೊಸ ದಾರಾವಾಹಿ ನೋಡಲು ಶುರುಮಾಡಿದರು. ಅದು ಪ್ರತಿದಿನ 13 ಗಂಟೆಗೆ (ಒಂದು ಗಂಟೆಗೆ) ಪ್ರಸಾರವಾಗುತ್ತಿತ್ತು. ಹೀಗಾಗಿ 13ಬಿ ಎಂಬ ಮನೆಯಲ್ಲಿ 13ನೇ ನಂಬರಿನ ಚಾನಲ್‌ನಲ್ಲಿ 13 ಗಂಟೆಗೆ ಎಲ್ಲರೂ ದಾರಾವಾಹಿ ನೋಡುತ್ತಿದ್ದರು!

webdunia
IFM
ಒಂದು ದಿನ ಮನೋಹರ ತನ್ನ ಸಂಸಾರದಲ್ಲಿ ನಡೆಯುತ್ತಿರುವುದಕ್ಕೂ, ಆ ಹೊಸ ದಾರಾವಾಹಿಯಲ್ಲಿ ನಡೆಯುತ್ತಿರುವ ಘಟನೆಗಳಿಗೂ ಸಾಮ್ಯತೆಗಳಿವೆ ಎಂಬುದನ್ನು ಗ್ರಹಿಸುತ್ತಾನೆ. ಇದು ಹೇಗಿತ್ತೆಂದರೆ ಆತನ ಆ ದಿನದ ಘಟನೆಗಳನ್ನು ಟಿವಿ ಸೀರಿಯಲ್ ಆತನಿಗೆ ಮುಂಚಿತವಾಗಿ ಹೇಳುತ್ತಿದ್ದಂತೆ ಅನಿಸುತ್ತಿತ್ತು. ಇದಕ್ಕೆ ಉತ್ತರ ಹುಡುಕಲು ಯೋಚಿಸಿ ಯೋಚಿಸಿ ಆತನಿಗೆ ತಲೆಕೆಟ್ಟು ಚಿತ್ರಾನ್ನವಾಗಿತ್ತು. ಹೀಗಿರುವಾಗ ಆತ ತನ್ನ ಗೆಳೆಯ ಶಿವ( ಮುರಳಿ ಶರ್ಮ)ನ ಸಹಾಯ ಪಡೆಯಲು ಯೋಚಿಸುತ್ತಾನೆ. ನಂತರ ಏನಾಗುತ್ತದೆ ಎಂಬುದೇ ಕಥೆಯಲ್ಲಿರುವ ಥ್ರಿಲ್ಲರ್ ಅಧ್ಯಾಯ.

ನವೀನ ಕಲ್ಪನೆಯ ಈ ಸಿನಿಮಾ ಬಾಲಿವುಡ್ ಸಿನಿಮಾ ಪ್ರಪಂಚದಲ್ಲಿದ್ದ ಒಂದೇ ನಮೂನೆಯ ಭೂತದ ಚಿತ್ರಗಳ ಏಕತಾನತೆಯನ್ನು ಒಂದೇ ಏಟಿಗೆ ಹೊಡೆದೋಡಿಸುವಂತಿದೆ ಈ `'13ಬಿ'. ಬಾಲಿವುಡ್‌ಗೆ ಇದು ಹೊಸತೊಂದು ಹಾರರ್ ಆಯಾಮವನ್ನು ಕಟ್ಟಿಕೊಟ್ಟಿದೆ. ಹೀಗಾಗಿ 13ಬಿ ಹೆಚ್ಚು ಇಷ್ಟವಾಗುತ್ತದೆ. ಉತ್ತಮ ಚಿತ್ರಕಥೆ, ಭಾರತದ ಸಂಸ್ಕೃತಿಗೆ ಹೊಂದುವಂತಹ ಸಂಭಾಷಣೆ ಚಿತ್ರದ ಮೌಲ್ಯವನ್ನು ಹೆಚ್ಚಿಸಿವೆ. ನಗರ ಪ್ರದೇಶದಲ್ಲಿ ವಾಸಿಸುವ ಸಾಮಾನ್ಯ ಮನುಷ್ಯನ ಹೃದಯಕ್ಕೆ ಹತ್ತಿರವಾಗುವ ಕಥಾಹಂದರ ಹಾಗೂ ಸೆಟ್ಟಿಂಗ್ ಚಿತ್ರದ ಪ್ಲಸ್ ಪಾಯಿಂಟ್.

ಹೆದರಿಸುವ ವಸ್ತುವಾಗಿ ದಿನನಿತ್ಯ ಬಳಸುವಂತಹ ಲಿಫ್ಟ್ ಹಾಗೂ ಮೊಬೈಲ್ ಫೋನ್‌ಗಳನ್ನು ಬಹಳ ಉತ್ತಮವಾಗಿ ಈ ಚಿತ್ರದಲ್ಲಿ ಹಾರರ್ ಪರಿಕಲ್ಪನೆಗೆ ಬಳಸಿಕೊಳ್ಳಲಾಗಿದೆ. ಹಾಗಾಗಿ ಇದು ಸಹಜವಾಗಿ ನಡೆಯುವ ಕಥೆಯಂತೆ ಅನಿಸುತ್ತದೆ. ಅಲ್ಲದೆ, ರಾತ್ರಿಯಲ್ಲಿ ಭಯವನ್ನು ಸೃಷ್ಟಿಸುವುದಕ್ಕಿಂತಲೂ ಹಗಲಿನಲ್ಲಿಯೇ ಭಯ ತಂದೊಡ್ಡುವ ಘಟನೆಗಳನ್ನು ಸ್ಕ್ರೀನ್‌ನಲ್ಲಿ ತರುವುದು ತುಂಬಾ ಕಷ್ಟದ ಕೆಲಸ. ಆದರೂ, 13ಬಿ ಇದನ್ನೂ ಸ್ಕ್ರೀನ್‌ನಲ್ಲಿ ತರುವ ಮೂಲಕ ಯಶಸ್ವಿಯಾಗಿದೆ.

webdunia
IFM
ಹಲವು ಬಾರಿ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರುವಂತೆ ಮಾಡುವ ಈ ಸಿನಿಮಾದ ಎಲ್ಲ ಕ್ರೆಡಿಟ್ ನಿರ್ದೇಶಕ, ಚಿತ್ರಕಥೆ, ಕಥೆ, ಸಂಭಾಷಣೆಗಳ ಜವಾಬ್ದಾರಿ ನಿರ್ವಹಿಸಿದ ವಿಕ್ರಮ್.ಕೆ.ಕುಮಾರ್‌ಗೆ ಸಲ್ಲಬೇಕು. ಇದು ವಿಕ್ರಮ್‌ರ ಮೊದಲ ನಿರ್ದೇಶನವೂ ಹೌದು.

ಮನೋಹರನಿಗೆ ಆಗುವ ವಿಚಿತ್ರ ಘಟನೆಗಳಿಗೆ ಚಿತ್ರದ ಕೊನೆಯಲ್ಲಿ ಉತ್ತರವೂ ಸಿಗುತ್ತದೆ. ಸಿನಿಮಾದುದ್ದಕ್ಕೂ ಬರುವ ಪಾತ್ರಗಳ ಅಸಹಾಯಕತೆಯನ್ನು ನಿರ್ದೇಶಕರು ಕ್ಯಾಮರಾದ ಮೂಲಕ ಅಚ್ಚುಕಟ್ಟಾಗಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಥ್ರಿಲ್ಲರ್ ಸಿನಿಮಾ ಒಂದಕ್ಕೆ ಬೇಕಾಗುವ ಅದ್ಭುತ ಸಂಗೀತದ ಸಾಥ್ ಕೂಡಾ ಬಹಳ ಪ್ರೇಕ್ಷಕರ ಟೆನ್ಶನ್ ಹೆಚ್ಚಿಸುವ ಉತ್ತಮ ಸಾಧನವಾಗಿ ಮೂಡಿಬಂದಿದೆ. ಇವೆಲ್ಲವುಗಳ ಜತೆಜತೆಗೆ ಮನೋಹರ್ ದಂಪತಿಗಳ ಒಂದು ಬೆಡ್‌ರೂಂ ಸೀನ್, ಒಂದು ಭಾವನಾಮಯ ಹಾಡು ಇವೆಲ್ಲವೂ ಕಥೆಗೆ ಮಸಾಲೆ ಟಚ್ ನೀಡಿವೆ.

ಇವೆಲ್ಲವನ್ನು ಬಿಟ್ಟರೂ ಚಿತ್ರವನ್ನು ನೋಡಲೇಬೇಕು ಎನಿಸುವುದು ಮಾಧವನ್ ಅವರ ಆಕರ್ಷಕ ನಟನೆಗೆ. ವಿಚಿತ್ರ ಘಟನೆಗಳಿಗೆ ಒಳಗಾಗುತ್ತಿರುವಾಗಿನ ಮಾನಸಿಕ ಸಂದಿಗ್ಧತೆಯನ್ನು ಮಾಧವನ್ ಬ್ರಿಲಿಯಂಟ್ ಆಗಿಯೇ ನಟಿಸಿದ್ದಾರೆ. ಕಡಿಮೆ ಮೇಕಪ್‌ನಲ್ಲಿ ನೀತು ಚಂದ್ರ ಮಾಧವನ್‌ಗೆ ಉತ್ತಮ ಸಾಥ್ ನೀಡುತ್ತಾರೆ. ಮುರಳಿ ಶರ್ಮ ಅಭಿನಯ ಚೆನ್ನಾಗಿದೆ. ಬಹಳ ಸಮಯದ ನಂತರ ಮರಳಿರುವ ಪೂನಂ ಧಿಲ್ಲಾನ್ ಅಭಿನಯವೂ ಅಚ್ಚುಕಟ್ಟಾಗಿದೆ. ಸಣ್ಣ ಪಾತ್ರವೊಂದರಲ್ಲಿ ಎಂಟ್ರಿ ಕೊಡುವ ದೀಪಕ್ ದೋಬ್ರಿಯಾಲ್ ತುಂಬ ಇಂಪ್ರೆಸ್ ಮಾಡುತ್ತಾರೆ.

ಒಟ್ಟಾರೆ 13ಬಿ ಸಿನಿಮಾವನ್ನು ಮಿಸ್ ಮಾಡುವುದು ಹೆಡ್ಡತನವೇ ಸರಿ. ಬಾಲಿವುಡ್ ಸಿನಿಮಾ ಇತಿಹಾಸದಲ್ಲಿಯೇ ಇಷ್ಟೊಂದು ಬುದ್ಧಿವಂತಿಕೆ ಬಳಸಿ ಮಾಡಿದ ಥ್ರಿಲ್ಲರ್ ಸದ್ಯದ ಕೆಲವು ವರ್ಷಗಳಲ್ಲಿ ಬಂದಿಲ್ಲವೆಂದೇ ಹೇಳಬಹುದು. ನಾವು ನಿರೀಕ್ಷಿಸದೇ ಇರುವ ಸಂಗತಿಗಳನ್ನು ಹೇಳುವ ಸಿನಿಮಾ 13ಬಿಯನ್ನು ಮಾತ್ರ ಮರೆಯದೆ ಒಮ್ಮೆ ನೋಡಿ. ಇದು ನಿಮ್ಮ ಆ ದಿನದ ಉತ್ಸಾಹವನ್ನು ಇಮ್ಮಡಿಗೊಳಿಸುವ ಜತೆಗೆ ಒಂದು ಹೊಸ ಥ್ರಿಲ್ಲನ್ನೂ ನೀಡುತ್ತದೆಯಂತೂ ನಿಜ.
webdunia
IFM

Share this Story:

Follow Webdunia kannada