ಬಿಲ್ಲೂ ಬಾರ್ಬರ್- ಇರ್ಫಾನ್ ಅದ್ಭುತ; ಶಾರೂಖ್ ನೆಪ ಮಾತ್ರ
ಚಿತ್ರ: ಬಿಲ್ಲೂ ಬಾರ್ಬರ್ ತಾರಾಗಣ: ಇರ್ಫಾನ್ ಖಾನ್, ಲಾರಾ ದತ್ತ, ಶಾರೂಖ್ ಖಾನ್, ರಾಜ್ಪಾಲ್ ಯಾದವ್ ನಿರ್ದೇಶನ: ಪ್ರಿಯದರ್ಶನ್ ಆತ ನಿಷ್ಠಾವಂತ, ಪ್ರಾಮಾಣಿಕ ವ್ಯಕ್ತಿ. ಆತನ ಹೆಸರು ಬಿಲಾಸ್ ರಾವ್ ಪರದೇಸಿ (ಇರ್ಫಾನ್ ಖಾನ್). ಕುಗ್ರಾಮದಲ್ಲಿ ವಾಸಿಸುತ್ತಿರುವ ಆತ ಉದ್ಯೋಗದಲ್ಲಿ ಕ್ಷೌರಿಕ. ಹಾಗಾಗಿ ಎಲ್ಲರೂ ಕರೆಯುವುದು ಬಿಲ್ಲೂ ಬಾರ್ಬರ್. ಬಿಲ್ಲೂ ಹರಿತ ನಾಲಗೆಯ ವ್ಯಕ್ತಿ. ಅನ್ಯಾಯ, ಅನಾಚಾರಗಳು ಆತನ ಹತ್ತಿರವೂ ಬಾರವು. ಆತನ ಹೆಂಡತಿ ಬಿಂದಿಯಾ (ಲಾರಾ ದತ್ತ). ಗಂಡನಿಗೆ ತಕ್ಕ ಹೆಂಡತಿ. ಆತನನ್ನು ಅರ್ಥ ಮಾಡಿಕೊಂಡು, ಧೋರಣೆಗಳಿಗೆ ತಕ್ಕುದಾಗಿ ನಡೆದುಕೊಳ್ಳುವಂತವಳು. ಕಿತ್ತು ತಿನ್ನುವ ಬಡತನದ ನಡುವೆ ಇವರಿಗೆ ಇಬ್ಬರು ಮಕ್ಕಳು.ಊರಲ್ಲೆಲ್ಲಾ ಆತನನ್ನು ಹೀಯಾಳಿಸುವವರೇ. ಹೀಗಿರುವಾಗ ಒಂದು ದಿನ ಜನಪ್ರಿಯ ನಟ ಸಾಹಿರ್ ಖಾನ್ (ಶಾರೂಖ್ ಖಾನ್) ಅದೇ ಊರಿಗೆ ಸಿನಿಮಾ ಚಿತ್ರೀಕರಣಕ್ಕೆಂದು ಬಂದಿರುತ್ತಾನೆ. ಆತ ಬಿಲ್ಲೂ ಬಾರ್ಬರ್‌ನ ಬಾಲ್ಯದ ಗೆಳೆಯ. ಬಾಲ್ಯದ ಗೆಳೆಯ ಸಾಹಿರ್ ಜತೆ ಬಿಲ್ಲೂ ಕೇವಲ ಒಂದೇ ಬಟ್ಟಲಲ್ಲಿ ಊಟ ಮಾಡಿದ್ದು ಮಾತ್ರವಲ್ಲ, ಆತನ ಜೀವನವನ್ನೂ ರೂಪಿಸಿದ್ದ. ಸಾಹಿರ್ ಸಿನಿಮಾ ಸೇರಲೆಂದು ತನ್ನಲ್ಲಿದ್ದ ಕಿವಿಯೋಲೆ ಮಾರಿ ಮುಂಬೈಗೆ ಕಳುಹಿಸಿದ್ದ ಬಿಲ್ಲೂವನ್ನು ದಿನ ಕಳೆದಂತೆ ಸಾಹಿರ್ ಮರೆತೇ ಬಿಟ್ಟಿದ್ದ.ಜನಪ್ರಿಯ ನಟ ಸಾಹಿರ್ ಬಿಲ್ಲೂ ಗೆಳೆಯ ಎಂದು ತಿಳಿಯುತ್ತಿದ್ದಂತೆ ಬಿಲ್ಲೂ ಸ್ಥಿತಿ-ಗತಿಯೇ ಬದಲಾಗಿ ಹೋಗುತ್ತದೆ. ಊರಲ್ಲೆಲ್ಲ ಬಿಲ್ಲೂಗೆ ಬೇಡಿಕೆಯೇ ಬೇಡಿಕೆ. ಕಂಡೂ ಕಾಣದಂತೆ ದೂರದಿಂದಲೇ ಹೋಗುತ್ತಿದ್ದವರೆಲ್ಲ ಓಡಿಸಿಕೊಂಡು ಬಂದು ಮಾತನಾಡುವಷ್ಟು ದುಬಾರಿಯಾಗುತ್ತಾನೆ ಬಿಲ್ಲೂ. ಇದ್ದಕ್ಕಿದ್ದಂತೆ ಬಿಲ್ಲೂವಿನ ಜೀವನವೂ ಬದಲಾಗುತ್ತದೆ.
ಇಬ್ಬರ ನಡುವಿನ ಸ್ನೇಹವನ್ನು ಶ್ರೀಕೃಷ್ಣ ಮತ್ತು ಸುಧಾಮನಿಗೆ ಹೋಲಿಸಲಾಗಿದೆ. ಬಡತನ - ಸಿರಿತನ ಮತ್ತು ಗೆಳೆತನದ ಸಂಬಂಧಗಳನ್ನು ಬಿಚ್ಚಿಡುತ್ತಾ ಹೋಗುವ ಚಿತ್ರ ನೋಡುತ್ತಾ ಅಲ್ಲಲ್ಲಿ ಕಣ್ಣೀರು ತರಿಸುತ್ತದೆ. ಇರ್ಫಾನ್ ಖಾನ್ ನಟಿಸುವ ಬದಲು ಅನುಭವಿಸಿದ್ದಾರೆ. ಅವರೇ ಚಿತ್ರದ ಹೈಲೈಟ್. ಚಿತ್ರದಲ್ಲಿ ಶಾರೂಖ್ ಖಾನ್ ಇರುವುದರಿಂದ ಸಾಕಷ್ಟು ಗ್ಲಾಮರ್ ಅಂಶಗಳನ್ನು ತುರುಕಿಸಲಾಗಿದೆ. ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಪ್ರಿಯಾಂಕಾ ಛೋಪ್ರಾ ಅಲ್ಲಲ್ಲಿ ಬಂದು ಕುಣಿದು ಹೋಗುತ್ತಾರೆ. ರಾಜ್ಪಾಲ್ ಯಾದವ್, ಓಂ ಪುರಿ ಪಾತ್ರಗಳೂ ಗಮನ ಸೆಳೆಯುತ್ತದೆ. ಕಥೆಯ ಬಗ್ಗೆ ಎರಡು ಮಾತಿಲ್ಲ.ನೀವು ಶಾರೂಖ್ ಖಾನ್ ಚಿತ್ರ ಇದೆಂದು ಹೋದಿರಾದರೆ ಖಂಡಿತಾ ನಿಮಗೆ ನಿರಾಶೆಯಾಗಬಹುದು. ಆದರೆ ನಿಮಗೊಂದು ಉತ್ತಮ ಕಥೆಯ ಭಿನ್ನ ಸಿನಿಮಾ ಬೇಕೆಂದಿದ್ದರೆ ಖಂಡಿತಾ ಹೋಗಿ. ಇರ್ಫಾನ್ ಖಾನ್ ತನ್ನ ನೈಜ ನಟನೆಯಿಂದ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸಿದರೆ ಅತ್ತ ಕಡೆ ಶಾರೂಖ್ ಖಾನ್ ಮಾಡಿದ ಪಾತ್ರವನ್ನು ಬೇರೆ ಯಾರಿಗೂ ಮಾಡಲು ಸಾಧ್ಯವಿಲ್ಲ ಎಂದು ಸಿನಿಮಾ ಮುಗಿದ ನಂತರ ನಿಮಗನ್ನಿಸಬಹುದು. ಥಿಯೇಟರಿನಿಂದ ಹೊರ ಬಂದಾಗ ನಿಮ್ಮ ಮುಖದಲ್ಲಿ ತೃಪ್ತ ಭಾವನೆ ಬರದೇ ಇರದು ಎಂದು ಭರವಸೆ ಕೊಡುವಷ್ಟು ಚಿತ್ರ ಚೆನ್ನಾಗಿದೆ.ಬಾಟಮ್ ಲೈನ್: ಇದು ಮಲಯಾಳಂನ ಶ್ರೀನಿವಾಸನ್ ನಿರ್ದೇಶನದ 'ಕಥಾ ಪರಯಂಬೋಲ್' ಚಿತ್ರದ ರಿಮೇಕ್. ಅಲ್ಲಿ ನಾಯಕನಾಗಿ ಮಮ್ಮೂಟ್ಟಿ ನಟಿಸಿದ್ದರು. ಕಳೆದ ವರ್ಷ ರಜನಿಕಾಂತ್ ಇದೇ ಸಿನಿಮಾದ ತಮಿಳು ರಿಮೇಕ್ 'ಕುಚೇಲನ್'ನಲ್ಲಿ ನಟಿಸಿದ್ದರು. ಸಿನಿಮಾ ತೋಪೆದ್ದು ಹೋಗಿತ್ತು.